ಸಿದ್ದಾಪುರ: ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಸಮಯದಲ್ಲಿ ತೋಟಗಳ ಕಾರ್ಮಿಕರು ಕೆಲಸ ನಿಲ್ಲಿಸುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಮ್ಮತ್ತಿ, ಕಾವಾಡಿ, ಕುಂಬೇರಿ, ಹೊಸೂರು,ಹಾಲಗುಂದ, ಬೈರಂಬಾಡ, ಯಡೂರು, ಹಚ್ಚಿನಾಡು,ಕಣ್ಣಂಗಾಲ ಗುಹ್ಯ, ಪುಲಿಯೇರಿ, ಇಂಜಿಲಗರೆ, ಸಿದ್ದಾಪುರ ಕರಡಿಗೋಡು, ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಜು.4ರಿಂದ 7ರವರೆಗೆ ನಾಲ್ಕು ದಿನ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ತೋಟದ ಕಾರ್ಮಿಕರು ಕೆಲಸ, ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು, ವಾಹನ ಚಾಲಕರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕು. ಈ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ವಿರಾಜಪೇಟೆ ವಲಯ ಅರಣ್ಯ ಅಧಿಕಾರಿಗಳು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.