ಮುಧೋಳದಲ್ಲಿ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರ ಕಾನೂನು ಅರಿವು ನೆರವು ಕಾರ್ಯಾಗಾರದಲ್ಲಿ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ಸಿಪಿಐ ಮಹಾದೇವ ಶಿರಹಟ್ಟಿ ವೀರೇಶ ಮಾಶ್ಯಾಳ, ಲಗಮು ಹುಕ್ಕೇರಿ, ಆಹಾರ ಇಲಾಖೆ ಶಿರಸ್ತೆದಾರ ಡಿ.ಬಿ. ದೇಶಪಾಂಡೆ ಇದ್ದರು. 
ಜಿಲ್ಲೆ

ಕಾರ್ಮಿಕರೂ ಗೌರವಯುತ ಜೀವನ ಸಾಗಿಸಲಿ

Vijayapura - Desk - Gurappa Lokuri

ಮುಧೋಳ: ಶಿಕ್ಷಣವಂಚಿತ ಕಾರ್ಮಿಕರೂ ಸಮಾಜದಲ್ಲಿ ಗೌರವಯುತ ಜೀವನ ಸಾಗಿಸಬೇಕೆಂಬ ಸದುದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ಇಂತಹ ಕಾರ್ಯಾಗಾರಗಳು ಅನುಕರಣೀಯವಾಗಿವೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಹೇಳಿದರು.

ನಗರದ ಡಾ.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಭವನದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರಿಗೆ ಉಚಿತ ಕಾರ್ಯಾಗಾರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಪೂರ್ಣ ಪ್ರಮಾಣದ ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಸಮಾಜದಲ್ಲಿ ಸುಂದರ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು ಎಂದರು.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ 1996ರಲ್ಲಿ ಕೇಂದ್ರ ಹಾಗೂ 2007ರಲ್ಲಿ ರಾಜ್ಯ ಸರ್ಕಾರದಿಂದ ಜಾರಿಗೊಂಡಿರುವ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹೆಚ್ಚು ಅನುಕೂಲವಾಗಿದೆ ಎಂದು ತಿಳಿಸಿದರು.

ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆದುಕೊಂಡು ಸುಂದರ ಜೀವನ ರೂಪಿಸಿಕೊಳ್ಳಬೇಕು. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಮಹಾದೇವ ಶಿರಹಟ್ಟಿ, ವೀರೇಶ ಮಾಶ್ಯಾಳ, ಲಗಮು ಹುಕ್ಕೇರಿ, ಆಹಾರ ಇಲಾಖೆ ಶಿರಸ್ತೆದಾರ್ ಡಿ.ಬಿ. ದೇಶಪಾಂಡೆ, ರಾಜು ಕುಡೇಕರ, ಪಾಂಡುರಂಗ, ಸುಧಾಕರ ಬಡಿಗೇರ, ಶಿವಾನಂದ ಬಡಿಗೇರ, ಕಾರ್ಮಿಕ ಇಲಾಖೆ ರಮೇಶ ವಂಗಿ ಇದ್ದರು.