ಜಿಲ್ಲೆ

ಪರಿಹಾರ ನೀಡುವ ಕೆಲಸ ಶೀಘ್ರವಾಗಲಿ

Hassan

ಹಾಸನ: ರಾಷ್ಟ್ರೀಯ ಹೆದ್ದಾರಿಗೆ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಿ ಕೆಲಸ ಪ್ರಾರಂಭಿಸಬೇಕು. ಇಲ್ಲದಿದ್ದರೆ ಭೂ ಮಾಲೀಕರೊಂದಿಗೆ ಒಟ್ಟಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಎಚ್ಚರಿಕೆ ನೀಡಿದರು.

ನಗರದ ಎಂ.ಹೊಸಕೊಪ್ಪಲಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಈ ವೇಳೆ ನಗರಸಭೆ ಆಯುಕ್ತ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ಗೆ ತೀವ್ರ ತರಾಟೆ ತೆಗೆದುಕೊಂಡರು.

ಜಮೀನ್ದಾರರಾಗಿ ಬದುಕು ನಡೆಸಿದ್ದ ಅನೇಕರು ಕೈಗಾರಿಕಾ ಉದ್ದೇಶಕ್ಕೆ ಭೂಮಿ ನೀಡಿ ನಷ್ಟ ಅನುಭವಿಸಿದ್ದಾರೆ. ಕಳೆದ 20 ವರ್ಷಗಳಿಂದ ಇಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ. ಈಗ ರಸ್ತೆಗಾಗಿ ಮತ್ತೆ ಭೂಮಿ ವಶಪಡಿಸಿಕೊಂಡಿದ್ದು ಇದುವರೆಗೆ ಸೂಕ್ತ ಪರಿಹಾರ ನೀಡಿಲ್ಲ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕೇಳಿದರೆ ನಗರಸಭೆಯವರೇ ಭೂಮಿ ಹಸ್ತಾಂತರಿಸಬೇಕು ಎನ್ನುತ್ತಾರೆ. ರಾಷ್ಟ್ರೀಯ ಹೆದ್ದಾರಿಯವರೇ ಪರಿಹಾರ ನೀಡಬೇಕಾಗುತ್ತದೆ ಎಂದು ನಗರಸಭೆಯವರು ಉತ್ತರಿಸುತ್ತಾರೆ. ಇಬ್ಬರ ಜಗಳದಲ್ಲಿ ಭೂ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಮನಸ್ಸು ಯಾರಿಗೂ ಇಲ್ಲದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಆಹ್ವಾನ ನೀಡದೆ ಅಗೌರವ: ಹಿಂದಿನ ಸರ್ಕಾರದಲ್ಲಿ ಅನುಮೋದನೆ ಪಡೆದ ಕಾಮಗಾರಿಗೆ ಈಗ ಭೂಮಿ ಪೂಜೆ ನೆರವೇರಿಸುತ್ತಿದ್ದಾರೆ. ಆ ಸಮಾರಂಭಕ್ಕೆ ಸಂಸದರು, ನಗರಸಭೆ ಸದಸ್ಯರನ್ನು ಆಹ್ವಾನಿಸದೆ ಅಗೌರವ ತೋರುತ್ತಿದ್ದೀರಿ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರನ್ನು ಜಿಲ್ಲಾಧಿಕಾರಿ ಎದುರೇ ಸಂಸದ ಪ್ರಜ್ವಲ್ ರೇವಣ್ಣ ತೀವ್ರ ವಿಚಾರಣೆಗೆ ಒಳಪಡಿಸಿದರು.

ಯಾರದೋ ಕಾಲದಲ್ಲಿ ಅನುದಾನ ಬಂದಿರುವುದಕ್ಕೆ ಈಗ ಪೂಜೆ ಮಾಡುತ್ತಾರೆಂದರೆ ಏನರ್ಥ. ಒಂದು ಮಾತಾದರೂ ನಮ್ಮನ್ನು ಕರೆದಿದ್ದೀರೆನ್ರಿ, ನೀವೆಲ್ಲ ಯಾಕ್ರಿ ಇನ್ನೂ ಕೆಲಸದಲ್ಲಿ ಇದ್ದೀರಾ ? ನನ್ನ ಮುಂದೆ ಇದೆಲ್ಲ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಮಗಾರಿಯೊಂದಕ್ಕೆ ಟೆಂಡರ್‌ನ ಕೊನೆಯ ದಿನದ ಸಮಯವನ್ನು 4 ಪಿ.ಎಂ. ಇದ್ದುದ್ದನ್ನು 4 ಎ.ಎಂ. ಎಂದು ಮಾಡಿಕೊಂಡಿದ್ದೀರಿ. ನೀವು ಮತ್ತು ಆ ಹುಡಾ ಕಮಿಷನರ್ ರಮೇಶ್ ಏನೇನು ಮಾಡುತ್ತೀದ್ದೀರಿ ಎಂಬ ಸಂಪೂರ್ಣ ಮಾಹಿತಿ ನನಗಿದೆ. ಜಿಲ್ಲಾಧಿಕಾರಿ ಅವರೇ ಕೂಡಲೇ ಇವರಿಗೆಲ್ಲ ನೋಟಿಸ್ ನೀಡಬೇಕೆಂದು ಪಟ್ಟು ಹಿಡಿದರು.
ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ಉಪವಿಭಾಗಾಧಿಕಾರಿ ಡಾ.ನವೀನ್ ಭಟ್ ಸೂಕ್ತ ಕ್ರಮದ ಭರವಸೆ ನೀಡಿ ಸಂಸದರನ್ನು ಸಮಾಧಾನಪಡಿಸಿದರು.