ಜಿಲ್ಲೆ

ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆಯಲಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ನಾವು ವಾಸಿಸುವ ವ್ಯಾಪ್ತಿಯಲ್ಲಿ ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆಯಬೇಕು. ಆಗ ಪರಿಸರದ ಸಮತೋಲನ ಸಾಧ್ಯ ಎಂದು ಕೋಟದ ವಿವೇಕ ವಿದ್ಯಾಸಂಸ್ಥೆ ಪ್ರಾಂಶುಪಾಲ, ಪರಿಸರ ಪ್ರೇಮಿ ಕೆ.ಜಗದೀಶ ನಾವಡ ಅಭಿಪ್ರಾಯಪಟ್ಟರು.

ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಗೀತಾನಂದ ಫೌಂಡೇಶನ್, ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಸುವರ್ಣ ಎಂಟರ್‌ಪ್ರೈಸೆಸ್, ಕೋಟ ಸಮುದ್ಯತಾ ಗ್ರೂಪ್ಸ್, ಮಣೂರು ಫ್ರೆಂಡ್ಸ್, ಮಣೂರು ಸ್ನೇಹಕೂಟ, ಕೋಟ ಹಂದಟ್ಟು ಮಹಿಳಾ ಬಳಗ ಸಹಯೋಗದೊಂದಿಗೆ ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಂಯೋಜನೆಯೊಂದಿಗೆ 257ನೇ ವಾರದ ಪರಿಸರಸ್ನೇಹಿ ಹಸಿರು ಜೀವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಬ್ರಹ್ಮಾವರ ಸುವರ್ಣ ಎಂಟರ್‌ಪ್ರೈಸಸ್ ಮಾಲೀಕ ಮಧುಸೂದನ ಹೇರೂರು ಪರಿಸರ ಜಾಗೃತಿ ಮರಗಳ ಮಹತ್ವ ತಿಳಿಸಿದರು. ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಜಾನಕಿ ಹಂದೆ ಪರಿಸರದವರಿಗೆ ಗಿಡ ವಿತರಿಸಿ ಜಾಗೃತಿ ಮೂಡಿಸಿದರು.

ಕೋಟತಟ್ಟು ಗ್ರಾಪಂ ಸದಸ್ಯ ಪ್ರಕಾಶ್ ಹಂದಟ್ಟು, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ನಿಕಟಪೂರ್ವ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲ ಉಪಾಧ್ಯಕ್ಷೆ ಪುಷ್ಪಾ ಕೆ.ಹಂದಟ್ಟು ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.