ಮೈಸೂರು: ವಿದ್ಯಾರ್ಥಿಗಳಿಗೆ ಮಾಹಿತಿ ಎಲ್ಲೆಡೆ ಸಿಗುತ್ತದೆ. ಅದನ್ನು ಜ್ಞಾನವನ್ನಾಗಿ ರೂಪಿಸುವ ಕೆಲಸ ಶಿಕ್ಷಕನಿಂದಾಗಬೇಕು ಎಂದು ಸಾಹಿತಿ ಡಾ.ಬಿ.ಪ್ರಭುಸ್ವಾಮಿ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಎಷ್ಟೋ ಸಂದರ್ಭಗಳಲ್ಲಿ ವಿದ್ಯಾರ್ಥಿಯು ಶಿಕ್ಷಕನಂತೆಯೇ ತುಂಬ ಜ್ಞಾನವಂತನಾಗಿರುತ್ತಾನೆ. ಆದ್ದರಿಂದ ಅಲ್ಲಮಪ್ರಭು ಹೇಳಿದಂತೆ ಪರಸ್ಪರ ಜ್ಞಾನಕ್ಕೆ ವಂದಿಸುತ್ತಾ ಕಲಿಕಾ ಪ್ರಕ್ರಿಯೆ ಸಾಗಲಿ ಎಂದರು
ಭಾರತೀಯ ಪರಂಪರೆಯು ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ನೀಡಿದೆ. ಗುರುವನ್ನು ಪರಬ್ರಹ್ಮನೆಂದು ಕರೆದು ಗೌರವಿಸುವ ನೆಲ ನಮ್ಮದು. ಅಂತಹ ಬುದ್ಧ, ಚಾಣಕ್ಯ ಮೊದಲಾದವರ ಪರಂಪರೆಯಲ್ಲಿ ಡಾ. ರಾಧಾಕೃಷ್ಣನ್ ಇದ್ದಾರೆ. ಅವರು ರಾಷ್ಟ್ರಪತಿಯಾಗಿ ಉನ್ನತ ಸ್ಥಾನದಲ್ಲಿದ್ದರೂ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರೀತಿಸುತ್ತಿದ್ದರು. ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ಇಷ್ಟಪಟ್ಟರು. ಅಂತೆಯೇ ಈ ದಿನ ರಾಧಾಕೃಷ್ಣನ್‌ರವರ ಜನ್ಮದಿನದ ಆಚರಣೆಯ ಜತೆಗೆ ನಮ್ಮ ಗುರುಪರಂಪರೆಯನ್ನು ನೆನೆದು ಗೌರವಿಸೋಣ ಎಂದು ಹೇಳಿದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಡಾ.ರಾಧಾಕೃಷ್ಣನ್ ಸದಾ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದರು. ಅದುವೇ ನಮಗೆ ಆದರ್ಶಪ್ರಾಯ ಎಂದರು. ಶಿಕ್ಷಕರಾದ ನಾವುಗಳು ನಮ್ಮ ಪಾತ್ರವನ್ನು ಅರಿತು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಎಲ್ಲರನ್ನೂ ಸಮಾನವಾಗಿ ಕಾಣುವ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿ ಮಾತ್ರ. ಆ ಕಾರಣದಿಂದ ಇದು ವಿಶ್ವಮಾನ್ಯ ಅಗ್ರಗಣ್ಯ ವೃತ್ತಿಯಾಗಿದೆ ಎಂದರು. ವಿದ್ಯಾರ್ಥಿಗಳಾದ ಅಥಿರಾ ದಾಸ್ ಮತ್ತು ವಾಣಿ ಶಿಕ್ಷಕರ ಮಹತ್ವ ಕುರಿತು ಮಾತನಾಡಿದರು.ಡಾ. ಎಲ್. ವಿನಯ್‌ಕುಮಾರ್ ಇತರರು ಇದ್ದರು.