ಡಿಸಿಸಿ ಬ್ಯಾಂಕ್ನ ನಿರ್ದೇಶಕ ಎ.ನಾಗರಾಜ್ ಆಗ್ರಹ
ಶಿಡ್ಲಟ್ಟ: ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳು, ನಿಗಮ, ಸ್ಥಳಿಯ ಸಂಸ್ಥೆಗಳಲ್ಲಿ ನಾಮ ನಿರ್ದೇಶನ ಸ್ಥಾನಗಳಿಗೆ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರನ್ನು ಕೂಡಲೇ ನೇಮಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಡಿಸಿಸಿ ಬ್ಯಾಂಕ್ನ ನಿರ್ದೇಶಕ ಹಾಗೂ ಕುರುಬರ ಸಂದ ಜಿಲ್ಲಾಧ್ಯಕ್ಷ ಎ.ನಾಗರಾಜ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯಿತು. ಇದುವರೆಗೂ ಶಿಡ್ಲಟ್ಟ ಸೇರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಮ ನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡದಿರುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆಯಲ್ಲದೆ, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೂ ನಿರಾಸೆ ಉಂಟಾಗಿದೆ ಎಂದು ಆಪಾದಿಸಿದರು.
ಈಗಾಗಲೇ ಶಿಡ್ಲಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲು ಮೂರ್ನಾಲ್ಕು ಬಾರಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಕೊಟ್ಟರೂ ಶಿಡ್ಲಟ್ಟದಲ್ಲಿ ರಾಜೀವ್ಗೌಡ ಮತ್ತು ಪುಟ್ಟು ಆಂಜಿನಪ್ಪ ಬಣಗಳು ಇವೆ ಎಂದು ಸಬೂಬು ಹೇಳಿ ನೇಮಕ ಮಾಡುತ್ತಿಲ್ಲ. ಆದರೆ, ಅಧಿಕಾರಿಗಳ ವರ್ಗಾವಣೆಗೆ ಮಾತ್ರ ಬಣಗಳು ಇಲ್ಲವೇ? ನೀವು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿರುವುದು ಅಭಿವೃದ್ಧಿ ಕಾರ್ಯಗಳನ್ನು ಮಾಡಲೋ ಅಥವಾ ಅಧಿಕಾರಿಗಳ ವರ್ಗಾವಣೆ ಮಾಡಲೋ ಎಂದು ಪ್ರಶ್ನಿಸಿದರು.
ಪಕ್ಷ ಕಟ್ಟುವ ಕೆಲಸವೂ ಆಗಲಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಪಾಲಿಗೆ ಅಕ್ಷಯ ಪಾತ್ರೆಯಂತಿದ್ದ ಡಿಸಿಸಿ ಬ್ಯಾಂಕ್ಗೆ ಚುನಾವಣೆ ನಡೆದು ಒಂದೂವರೆ ತಿಂಗಳು ಆಯಿತು. ಕಾಂಗ್ರೆಸ್ ಬೆಂಬಲಿತರೆ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದಾರೆ. ಇಬ್ಬರು ಸಚಿವರು ಇದ್ದೀರಿ, ಇದುವರೆಗೂ ಯಾವ ಕಾರಣಕ್ಕೆ ಯಾವುದೇ ಸಭೆ ನಡೆಸಿಲ್ಲ ಎಂದು ದೂರಿದರು. ನೀವು ಚಿಂತಾಮಣಿಗೆ ಮಾತ್ರ ಸಚಿವರಲ್ಲ. ಇಡೀ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದು ಅಭಿವೃದ್ಧಿ ಜತೆಗೆ ಜಿಲ್ಲೆಯಲ್ಲಿ ಎಲ್ಲಿ ಕಾಂಗ್ರೆಸ್ನ ಶಾಸಕರು ಇಲ್ಲವೋ ಅಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಕೂಡ ಮಾಡಿ, ಕೇವಲ ಚಿಂತಾಮಣಿಗೆ ಸೀಮಿತರಾಗಬೇಡಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕರ ಸಂದ ರಾಜ್ಯ ಕಾರ್ಯದರ್ಶಿ ಮುರಳಿ, ಕೆಪಿಸಿಸಿ ರಾಜ್ಯ ಸಂಚಾಲಕ ಎಸ್ಸಿ ಟಕ, ನಾರಾಯಣಸ್ವಾಮಿ, ಕುರುಬರ ಸಂದ ತಾಲೂಕು ಅಧ್ಯಕ್ಷ ಕೆ.ಮಂಜುನಾಥ್, ಮುಖಂಡರಾದ ಕೆ.ಶ್ರೀನಾಥ್, ರಾಮಾಂಜಿ, ಅಫೀಸ್ಉಲ್ಲಾ, ಎಂ.ನಾಗರಾಜ್, ಎಂ.ಮಂಜುನಾಥ್ ಇತರರು ಇದ್ದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಗಂಗರೆಕಾಲುವೆ ಹಿಂದುಳಿದ ವರ್ಗಗಳ ನಾಯಕ ನಾರಾಯಣಸ್ವಾಮಿ ಅವರನ್ನು ನೇಮಿಸಿ ಎಂದು ನಾಗರಾಜ್ ಅವರು ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದರು.
ಅಖಂಡ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವರು, ಎಲ್ಲ ಜಾತಿ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಆಡಳಿತ ನೀಡಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅವರಿಗೆ ಕೊಡಿ ಎಂದು ಆಗ್ರಹಿಸಿದರು.