ಜಿಲ್ಲೆ

ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿ

ವಸಂತಕುಮಾರ್ ಬಿ

ವಿರಾಜಪೇಟೆ: ತಮ್ಮ ಇಲಾಖೆಯ ಅಧೀನದಲ್ಲಿ ಬರುವ ರಸ್ತೆ, ತಡೆಗೋಡೆ, ಕಟ್ಟಡಗಳು, ಸೇತುವೆಗಳ ಕಾಮಗಾರಿಗಳನ್ನು ರಾಜ್ಯ ಸರ್ಕಾರ ಹಿಂದೆ ನೀಡಿದ ಅನುದಾನ ಮತ್ತು ಇದೀಗ ನೀಡಿದ ವಿಶೇಷ ಅನುದಾನದಿಂದ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿರಾಜಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಇಲಾಖೆಯ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ವೇಳೆ ವಿವಿಧ ಅನುದಾನದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಮಾಹಿತಿ ಪಡೆದು ಮಾತನಾಡಿದರು.

ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿ ಹಂತ ಹಂತವಾಗಿ ಹಾಗೂ ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಜಿಲ್ಲೆಯ ಬಹುತೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸುಮಾರು 250 ಕೋಟಿ ರೂ.ಗೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಬಗ್ಗೆ ಪ್ರಸ್ತಾಪಿಸಿದ ಮಂತರ್ ಗೌಡ, ಮಳೆ ಹಾನಿಯಿಂದ ತಡೆಗೋಡೆಯ ಒಂದು ಭಾಗ ಕುಸಿದಿದೆ. ಈ ಕುರಿತು ತಾಂತ್ರಿಕ ದೋಷವೆಂದು ಗುತ್ತಿಗೆದಾರರನ್ನು ದೂಷಿಸುವುದು ಸರಿಯಲ್ಲ. ಆರಂಭಿಕ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕಿತ್ತು ಎಂದರು.

ಇದಕ್ಕೆ ಉತ್ತರಿಸಿದ ಇಲಾಖೆಯ ಉನ್ನತ ಅಧಿಕಾರಿ ಅತ್ಯುನ್ನತ ತಂತ್ರಜ್ಞಾನ ಬಳಸಿ ಕುಸಿದಿರುವ ತಡೆಗೋಡೆಯ ಭಾಗವನ್ನು ಆದಷ್ಟು ಬೇಗ ಸರಿಪಡಿಸಲಾಗುತ್ತದೆ ಎಂದರು.

ಜಿಲ್ಲೆಯ ಪ್ರಮುಖ ನಗರಗಳಾದ ವಿರಾಜಪೇಟೆ, ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಗೋಣಿಕೊಪ್ಪದಲ್ಲಿ ವಾಹನದಟ್ಟಣೆ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಭವಿಷ್ಯದ ದೂರದೃಷ್ಟಿಯಿಂದ ರಿಂಗ್ ರೋಡ್ ನಿರ್ಮಾಣ ಮಾಡಲು ಶಾಸಕರು ಮನವಿ ಸಲ್ಲಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಗ್ಯಾರಂಟಿ ಯೋಜನೆ ರಾಜ್ಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೊಜ್ಹ್ ಖಾನ್, ಪುರಸಭೆ ಅಧ್ಯಕ್ಷೆೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷ ಫಸೀಹಾ ತಬುಸುಂ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೋಲುಮಂಡ ರಫೀಕ್, ಪಕ್ಷದ ಪ್ರಮುಖರು, ಪುರಸಭಾ ಸದಸ್ಯರು, ಲೋಕೋಪಯೋಗಿ ಇಲಾಖೆಯ ತಾಲೂಕು, ಜಿಲ್ಲಾ ರಾಜ್ಯ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.