ಜಿಲ್ಲೆ

ಮಹಿಳೆಯ ಪ್ರತಿಭೆ ಅರಳಲಿ

ಪ್ರಸಿನ್ ಕೆ.ಆರ್

ಗೋಣಿಕೊಪ್ಪ: ಕೊಡಗಿನ ಬೋಂಡಿಂಗ್ ಬ್ಲೂಮ್ಸ್ ನರ್ಚರಿಂಗ್ ನೇಚರ್ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಗೋಣಿಕೊಪ್ಪಲುವಿನಲ್ಲಿ ಸೋಮವಾರ ಜರುಗಿತು.

ಬೋಂಡಿಂಗ್ ಬ್ಲೂಮ್ಸ್ ನರ್ಚರಿಂಗ್ ನೇಚರ್‌ನ ಮುಖ್ಯಸ್ಥೆ ಬಾಚಮಾಡ ಲಿಜೆಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ತನ್ನೊಳಗೆ ಅಡಗಿರುವ ಪ್ರತಿಭೆಯ ಕಿಚ್ಚನ್ನು ಹೊತ್ತಿ ಉರಿಸುವಂತಾಗಬೇಕು. ಭತ್ತ ನಾಟಿ ಕೆಲಸದಲ್ಲಿ ನಮ್ಮ ನಾರಿಯರು ಪಾಲ್ಗೊಂಡು ಪ್ರಾಕೃತಿಕ ನೀರಿನ ಮಟ್ಟವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.

ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಗ್ರೀಷ್ಮಾ ಬೋಜಮ್ಮ, ತಡಿಯಂಗಡ ಗಾನ ಸೋಮಣ್ಣ ಹಾಗೂ ಕೊಂಗಂಡ ನಳಿನಾ ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗ್ರೀಷ್ಮಾ ಬೋಜಮ್ಮ, ಮಹಿಳೆಯರು ತಮಗೆ ಆಸಕ್ತಿಯುಳ್ಳ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

ತಡಿಯಂಗಡ ಗಾನ ಸೋಮಣ್ಣ, ನಳಿನಾ ಅಪ್ಪಯ್ಯ ಮಾತನಾಡಿದರು. ಕಾರ್ಯಕ್ರಮ ಅಂಗವಾಗಿ ವಿವಿಧ ರೀತಿಯ ಗಿಡಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.