ಜಿಲ್ಲೆ

ಮಹಿಳೆಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಬಿಡಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಮಹಿಳೆಯರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಬಿಡಿ. ಶಿಕ್ಷಣ, ವೃತ್ತಿ ಸೇರಿದಂತೆ ಭವಿಷ್ಯದ ಬಗ್ಗೆ ಮಹಿಳೆ ತನ್ನದೇ ಆದ ತೀರ್ಮಾನ ತೆಗೆದುಕೊಂಡಾಗ ಆಕೆ ಸಾಧಕ ಮಹಿಳೆಯಾಗುತ್ತಾಳೆ. ಯಶಸ್ಸು ಆಕೆಯ ಹಿಂದೆ ಬರುತ್ತದೆ. ಆಕೆಗೆ ಇರುವ ಅವಕಾಶಗಳನ್ನು ತಪ್ಪಿಸಬೇಡಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಶುಕ್ರವಾರ ಆಯೋಜಿಸಿದ್ದ ಮಹಿಳಾ ಸಾಧಕಿಯರ ಸನ್ಮಾನ ಸಮಾರಂಭ "ವೃದ್ಧಿ' ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಸವಾಲುಗಳು ಸಾಮಾನ್ಯ. ಆ ಸವಾಲುಗಳನ್ನು ಎದುರಿಸುವ ವಿಶೇಷ ಶಕ್ತಿ ಮಹಿಳೆಯರಲ್ಲಿ ಇರುತ್ತದೆ. ವೈದ್ಯಕಿಯ, ರಕ್ಷಣೆ, ಉದ್ಯಮ ಸೇರಿದಂತೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾಳೆ. ಆದರೂ, ಪುತ್ರ ಬೇಕೆಂಬ ಹಂಬಲ ಸುಶಿತರನ್ನೂ ಬಿಟ್ಟಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಒಬ್ಬ ಪೊಲೀಸ್​ ಅಧಿಕಾರಿ, ಐಎಎಸ್​ ಅಧಿಕಾರಿ, ಸೇನಾಧಿಕಾರಿ ಎಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಪುರುಷನ ವ್ಯಕ್ತಿತ್ವ ಮೂಡುತ್ತದೆ. ಆದರೆ, ಈ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರೂ ಸಾಧನೆ ಮಾಡಿದ್ದಾರೆ. ಗಗನಯಾನವನ್ನೂ ಮಹಿಳೆ ಮಾಡಿದ್ದಾಳೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶಗಳು ಇವೆ. ಆ ಅವಕಾಶಗಳನ್ನು ಪಡೆಯಲು ಆಕೆಗೆ ಪ್ರೋತ್ಸಾಹಿಸಿ ಎಂದು ತಿಳಿಸಿದರು.

ಅತಿಥಿಯಾಗಿದ್ದ ಮಿಸ್​ ಇಂಡಿಯಾ -2013 ಮತ್ತು ಬಾಲಿವುಡ್​ ನಟಿ ಸಿಮ್ರಾನ್​ ಅಹುಜಾ ಮಾತನಾಡಿ, ಭಯ, ಹಿಂಜರಿಕೆಯ ಮನೋಭಾವನೆ ತೊರೆದು ಸಾಧನೆ ಮಾಡಿ. ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದು ಅನ್ನಿಸುವುದೇ ಸಾಧನೆಯ ಮೊದಲ ಮೆಟ್ಟಿಲು. ಎಡೆಬಿಡದೇ ಪ್ರಯತ್ನಿಸಿ, ಅಂದುಕೊಂಡಿದ್ದನ್ನು ಸಾಧಿಸುವಂತೆ ಸಲಹೆ ನೀಡಿದರು.

ಮಹಿಳೆಯರಲ್ಲಿಯೂ ಶಕ್ತಿ ಇದೆ. ಆ ಶಕ್ತಿಯ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಪ್ರತಿಯೊಂದು ಕ್ಷಣವನ್ನು ಸಂತಸದಿಂದ ಕಳೆಯಿರಿ. ಸುತ್ತಲಿನ ಪರಿಸರವನ್ನು ಸಂತಸವಾಗಿಡಿ. ಎಂದಿಗೂ ಸಿಟ್ಟಾಗಬೇಡಿ. ಕುಟುಂಬದಲ್ಲಿನ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅಂದಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಹಿಳಾ ಸಾಧಕಿಯರಾದ ಗದಗನ ಶರಣೆ ಗಿರಿಜಕ್ಕ ಧರ್ಮರಡ್ಡಿ, ಧಾರವಾಡದ ಜ್ಯೋತಿ ಹಿರೇಮಠ ಹಾಗೂ ಹುಬ್ಬಳ್ಳಿಯ ಡಾ. ಕೆ.ಆರ್​. ರಾಜಶ್ರೀ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಎಸ್​.ಪಿ. ಸಂಶಿಮಠ, ಸಂಸ್ಥೆಯ ಮಹಿಳಾ ವಿಭಾಗದ ಅಧ್ಯೆ ಪಲ್ಲವಿ ಮಲಾನಿ, ಪದಾಧಿಕಾರಿಗಳಾದ ಸಂದೀಪ ಬಿಡಸಾರಿಯಾ, ಮಹೇಂದ್ರ ಸಿಂಘಿ, ರವೀಂದ್ರ ಬಳಿಗಾರ, ನೀಪಾ ಎಂ., ವೀರೇಶ ಮೋಟಗಿ, ಪ್ರವಿಣ ಅಗಡಿ, ಎಂ.ಸಿ. ಹಿರೇಮಠ, ಸವಿತಾ ಕಲ್ಲೊಳ್ಳಿ, ಶ್ರೀದೇವಿ ರೂಗಿ, ಜ್ಯೋತಿ ಬಿಡಸಾರಿಯಾ, ಪಾಯಲ ಎಂ. ಹಾಗೂ ಇತರರು ಹಾಜರಿದ್ದರು.