ಬೆಳಗಾವಿ: ಕನ್ನಡ ನಾಡು&ನುಡಿಗಾಗಿ ಹೋರಾಟ ನಡೆಸಿ ಸಾಂಸತಿಕ ಪ್ರಜ್ಞೆ ಜಾಗೃತಗೊಳಿಸಿದ ಬರಹಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ತಲೆಮಾರಿಗೆ ರವಾನಿಸುವ ಕೆಲಸ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಸರ್ಕಾರಿ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ರಾಜ್ಯಮಟ್ಟದ ಕಟ್ಟೀಮನಿ ಕಾದಂಬರಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಕಾಲಕಾಲಕ್ಕೆ ಪ್ರಜ್ಞಾವಂತ ಬರಹಗಾರರು ಸಮಾಜ ಮತ್ತು ರಾಜಕೀಯ ವಲಯಕ್ಕೆ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವ ಪ್ರಯತ್ನ ಮಾಡುತ್ತ ಬಂದಿದ್ದು, ಈ ಪರಂಪರೆ ಮುಂದುವರಿಯಬೇಕು ಎಂದರು.
ಬರಗೂರು ರಾಮಚಂದ್ರಪ್ಪ ಮಾತನಾಡಿ, ಪ್ರಗತಿಪರ ವಿಚಾರಧಾರೆಯ ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟೀಮನಿ ಪ್ರಶಸ್ತಿ ದೊರತಿರುವುದು ಪ್ರಗತಿಪರ ವಿಚಾರಧಾರೆಗೆ ಲಭಿಸಿದಂತಾಗಿದೆ. ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿ ಹಲವಾರು ಪ್ರಗತಿಶೀಲ ಪ್ರಶಸ್ತಿಗಳು ದೊರಕಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ನಿನ್ನೊಂದಿಗೆ ಇದ್ದರೂ ನಿನ್ನಂತೆ ನಾನಾಗಲಾರೆ ಎಂದು ಸ್ವಂತಿಕೆಯ ಸೃಜನಶೀಲತೆ ಮೆರೆದ ಪಂಪ ನನಗೆ ಆದರ್ಶ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ, ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಕಿರಣ ಗಾಜನೂರ, ಬಸವರಾಜ ಕಟ್ಟೀಮನಿ ಪುತ್ರಿ ಮಂಜುಳಾ ಬಿರಾದಾರ ಸೇರಿ ಕಟ್ಟೀಮನಿ ಪ್ರತಿಷ್ಠಾನದ ಪದಾಧಿಕಾರಿಗಳು ಸೇರಿ ಅನೇಕ ಗಣ್ಯರು, ಪ್ರಾಧ್ಯಾಪಕರು ಇದ್ದರು.