ಚನ್ನಪಟ್ಟಣ : ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯ ಲೋಕದ ಮಿನುಗು ತಾರೆ. ಅವರ ವಿಶ್ಚಮಾನವ ಸಂದೇಶ ಕೇವಲ ಸಂದೇಶವಾಗಿ ಉಳಿಯಬಾರದು. ಅದು ಕಾರ್ಯರೂಪಕ್ಕೆ ಬರಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಇಂಡಿಯನ್ ಆಕ್ಸ್‌ಫರ್ಡ್ ಶಾಲೆ ಮತ್ತು ಕಸಾಪ ಆಶ್ರಯದಲ್ಲಿ ನಗರದ ಗಾಂಧಿಭವನದ ಬಳಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಮೂವತ್ತು ವರ್ಷಕೊಮ್ಮೆ ಕಾಲಘಟ್ಟ ಬದಲಾಗುತ್ತದೆ. ಎಲ್ಲ ಕಾಲಘಟ್ಟದಲ್ಲೂ ಕುವೆಂಪು ಸ್ಮರಣೆ ಇರುತ್ತದೆ. ಸಮಾಜ ಹಾಗೂ ಸಾಹಿತ್ಯಕ್ಕೆ ಅವರ ಕೊಟ್ಟ ಕೊಡುಗೆ ಸದಾ ಜೀವಂತವಾಗಿದೆ. ಅವರು ನೀಡಿರುವ ವಿಶ್ವಮಾನವ ಸಂದೇಶ ನಿಜವಾಗಿಯೂ ಕಾರ್ಯರೂಪಕ್ಕೆ ಬಂದರೆ ಮಾತ್ರ ಸಮಾಜ ಬದಲಾವಣೆ ಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೇಶದ ಅಭಿವೃದ್ಧಿ ಹಾಗೂ ಭವಿಷ್ಯ, ಮಕ್ಕಳ ಮೇಲೆ ನಿಂತಿದೆ. ದೇಶದ ಭವಿಷ್ಯ ಬದಲಾಯಿಸಬೇಕಾದರೆ ಅದು ಮಕ್ಕಳಿಂದ ಮಾತ್ರ ಸಾಧ್ಯ. ಇಂದಿನ ಮಕ್ಕಳೇ ದೇಶದ ಭವಿಷ್ಯದ ರೂವಾರಿಗಳು. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕುವೆಂಪು ಸೇರಿ ಇನ್ನಿತರ ಮಹನೀಯರ ವಿಚಾರಧಾರೆಗಳ ಪ್ರಜ್ಞೆ ಮೂಡಿಸಬೇಕು. ಪ್ರಸುತ್ತ ಸಮಾಜದಲ್ಲಿ ಕೆಲವರು ವಿಶ್ವಮಾನವರಾಗದೇ, ಅಲ್ಪಮಾನವರಾಗುತ್ತಿದ್ದಾರೆ. ಸಮಾಜವನ್ನು ತಿದ್ದುವ ಕಾರ್ಯ ನಿರಂತರವಾಗಿರಬೇಕು. ಸಂಘ-ಸಂಸ್ಥೆಗಳು ಈ ದೆಸೆಯಲ್ಲಿ ಕಾರ್ಯೊನ್ಮುಖವಾಗಬೇಕು ಎಂದರು.
ನಾವು ಮಾಡುವ ಕೆಲಸಗಳಿಂದ ಸಮಾಜ ನಮ್ಮನ್ನು ಗುರುತಿಸುತ್ತದೆ. ಆದರೆ, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲದಲ್ಲಿದ್ದೇವೆ. ರಾಜಕಾರಣ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆ ಕಾಣಬೇಕಿದೆ. ಜನಪ್ರತಿನಿಧಿಗಳಾದವರು ಚುನಾವಣೆಯ ನಂತರ ಪಕ್ಷಾತೀತ ಕೆಲಸ ಮಾಡಬೇಕು. ರಾಜಕೀಯದಲ್ಲಿ ಸಂಸ್ಕೃತಿ ಬರಬೇಕು. ವ್ಯಕ್ತಿ ಹೊರಟು ಹೋಗುತ್ತಾನೆ. ಆದರೆ, ವ್ಯಕ್ತಿತ್ವಕ್ಕೆ ಸಾವಿಲ್ಲ. ಅದಕ್ಕೆ ಕುವೆಂಪು ಅವರೇ ಸಾಕ್ಷಿ ಎಂದರು.
ಉಪನ್ಯಾಸಕ ಲವೀಶ್ ಚಂದ್ರ ಮಾತನಾಡಿ, ಕುವೆಂಪು ಹೆಸರಿನಲ್ಲಿಯೇ ಆಕರ್ಷಣೆಯಿದೆ. ಕನ್ನಡ ಸಾಹಿತ್ಯ ಲೋಕವನ್ನು ಶಿಖರಕ್ಕೆ ಏರಿಸುವ ಮೂಲಕ ಕನ್ನಡ ಭಾಷೆಯನ್ನು ರಾಷ್ಟ್ರ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಅವರ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಕೊಡಬಹುದಾದ ನಿಜ ಗೌರವ ಎಂದರು.
ಕಾರ್ಯಕ್ರಮದಲ್ಲಿ ನೇಗಿಲಯೋಗಿ ಸಮಾಜದ ಸೇವಾ ಟ್ರಸ್ಟ್‌ನಿಂದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಇಂಡಿಯನ್ ಆಕ್ಸ್‌ಫರ್ಡ್ ಶಾಲೆ ಮಕ್ಕಳು ಕುವೆಂಪು ಕುರಿತಾದ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ಜಾಥಾ ನಡೆಸಿ, ಕುವೆಂಪು ಅವರಿಗೆ ಗೀತನಮನ ಸಲ್ಲಿಸಿದರು. ಪುತ್ಥಳಿ ನಿರ್ಮಾಣದ ರೂವಾರಿಗಳಾದ ಎಂ.ಸಿ. ಮಲ್ಲಯ್ಯ ಹಾಗೂ ಬೆಟ್ಟೇಗೌಡರವನ್ನು ಸನ್ಮಾನಿಸಲಾಯಿತು.
ಇಂಡಿಯನ್ ಆಕ್ಸ್‌ಫರ್ಡ್ ಶಾಲೆ ಸಂಸ್ಥಾಪಕಿ ಎಂ.ಎ.ಮಾಲಿನಿ, ಪುರಠಾಣೆ ಪಿಎಸ್‌ಐ ಹರೀಶ್, ರಾಮನಗರ ಕಸಾಪ ಅಧ್ಯಕ್ಷ ದಿನೇಶ್ ಬಿಳಗುಂಬ, ಸಂಸ್ಥೆ ಪದಾಧಿಕಾರಿಗಳಾದ ರಮ್ಯಸ್ವಾಮಿಗೌಡ , ಗೋವಿಂದಯ್ಯ, ತಿಪ್ರೇಗೌಡ, ಎಲೆಕೇರಿ ಮಂಜುನಾಥ್, ಬಿ.ಎನ್.ಕಾಡಯ್ಯ ಇತರರು ಇದ್ದರು.
ಕನಸುಗಳನ್ನು ಬಿಚ್ಚಿಟ್ಟ ಸಂಸದ
ಕಾಡಾನೆ ಸಮಸ್ಯೆ, ಎಲೆಕೇರಿ ಮೇಲ್ಸುತುವೆ ವಿಚಾರ ಸೇರಿ ಹಲವು ವಿಚಾರಗಳನ್ನು ಹಾಗೂ ಅವುಗಳ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ರೇಷ್ಮೆ ಸಾಕಣೆಗೆ ಹಾಗೂ ಉದ್ಯಮದ ಪ್ರಗತಿಗೆ ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಸಿಲ್ಕ್ ಜೋನ್ ಜತೆಗೆ, ಸಿಲ್ಕ್ ವೇಸ್ಟ್ ಬಳಕೆ ಹಾಗೂ ಸ್ಪನ್ ಸಿಲ್ಕ್ ಮಿಲ್ ಮರುಜೀವದ ಬಗ್ಗೆ ಸಂಸದ ಡಾ.ಮಂಜುನಾಥ್ ತಮ್ಮ ಅಭಿವೃದ್ಧಿ ಕನಸುಗಳನ್ನು ಸಭಿಕರ ಜತೆಗೆ ಹಂಚಿಕೊಂಡರು.