ಮುಂಡರಗಿ: ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಕೆಲಸ ಮಾಡುತ್ತಿರುವ ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷರನ್ನು ಒಂದು ವಾರದೊಳಗೆ ಬದಲಾಯಿಸಬೇಕು. ಇಲ್ಲದಿದ್ದರೆ ಗದಗ ಜಿಲ್ಲಾ ವಕ್ಪ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ಅಂಜುಮನ್ ಎ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಅಬ್ದುಲ್ಸಾಬ ಕೊಕ್ಕರಗುಂದಿ ಎಚ್ಚರಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಂದೂವರೆ ವರ್ಷದಿಂದ ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷರಾಗಿರುವ ಮೈಬೂಬಸಾಬ್ ಹವಾಲ್ದಾರ್ ಅವರು ಉಳಿದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಮಿಟಿಯಿಂದ ಕೈಗೊಳ್ಳುವಂತ ಕೆಲಸಗಳ ಬಗ್ಗೆ ರ್ಚಚಿಸದೇ ಮನಬಂದಂತೆ ಏಕನಿರ್ಣಯದ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಉಳಿದೆಲ್ಲ ಸದಸ್ಯರಿಗೆ ಅಗೌರವ ತೋರಲಾಗುತ್ತಿದೆ. ಹೀಗಾಗಿ ಒಟ್ಟು 11 ಸದಸ್ಯರ ಪೈಕಿ 8 ಸದಸ್ಯರು ಸೇರಿ ಅಧ್ಯಕ್ಷರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ಗದಗ ಜಿಲ್ಲಾ ವಕ್ಪ್ ಅಧಿಕಾರಿಗಳಿಗೆ ಈಗಾಗಲೆ ಎರಡ್ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಸ್ಥಳೀಯ ಅಂಜುಮನ್ ಎ ಇಸ್ಲಾಂ ಕಮಿಟಿ ಸದಸ್ಯ ಡಿ.ಎಂ. ನಾಗರಳ್ಳಿ ಮಾತನಾಡಿ, ಜನರ ಆಸೆಗೆ ತಕ್ಕ ರೀತಿ ಕಮಿಟಿಯಿಂದ ಕೆಲಸ ಮಾಡಬೇಕು. ಸಮಾಜದ ಏಳಿಗೆಗೆ ಹಿರಿಯರೊಂದಿಗೆ ಗೌರವ ಪೂರಕವಾಗಿ ನಡೆದುಕೊಳ್ಳಬೇಕು. ಆದರೆ, ಈಗಿನ ಅಧ್ಯಕ್ಷರು ಏಕಪಕ್ಷೀಯವಾಗಿ ಕೆಲಸ ಮಾಡುತ್ತಾರೆ. ಒಂದು ವಾರದೊಳಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಜುಮನ್ ಎ ಇಸ್ಲಾಂ ಕಮಿಟಿ ಖಜಾಂಚಿ ಮೊಹೀದ್ದಿನ್ ತಳಗಡೆ, ಸದಸ್ಯ ಇಸ್ಮಾಯಿಲ್ ಮುಲ್ಲಾ, ಮಹ್ಮದರಫೀ ಮುಲ್ಲಾ, ಇಸ್ಮಾಯಿಲ್ಸಾಬ್ ಮುಲ್ಲಾ, ಶಿರಾಜ್ ಬೆಟಗೇರಿ, ಅನ್ವರಬಾಷಾ ಹಣಗಿ, ಮೆಹಬೂಬ ಮುಲ್ಲಾ ಇದ್ದರು.