ಬೇಲೂರು: ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ಬೇಲೂರಿನಲ್ಲೇ ಹುಟ್ಟಿ ಬೆಳೆದಿದ್ದಿದ್ದರೆ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಆಚಾರ ವಿಚಾರ, ಸಂಪ್ರದಾಯ ತಿಳಿಯುತ್ತಿತ್ತು. ಶಾಸಕರು ಹೇಳಿದಂತೆ ದೇವಸ್ಥಾನ ವಿಚಾರದಲ್ಲಿ ಕೇಳಲು ಸಾಧ್ಯವಿಲ್ಲ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಹಿಂದಿನ ಸಂಪ್ರದಾಯ ಮುರಿದು ಅಡ್ಡೆ ಹೊರಲು ಟೆಂಡರ್ ಕರೆಯಲು ಯತ್ನಿಸುತ್ತಿರುವುದನ್ನು ವಿರೋಧಿಸಿ ನಾಲ್ಕು ಮೂಲೆ ಅಡ್ಡೆಗಾರರು ದೇಗುಲ ಮುಂಭಾಗ ಬುಧವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
900 ವರ್ಷಗಳ ಇತಿಹಾಸವಿರುವ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಅಡ್ಡೆಗಾರರು ಅಂದಿನಿಂದಲೂ ದೇವರ ಉತ್ಸವ ಮೂರ್ತಿ, ಗರುಡ, ಹನುಮಂತ, ಆನೆ ಸೇರಿದಂತೆ ಇತರ ಉತ್ಸವಗಳು, ರಥೋತ್ಸವ ಹಾಗೂ ಇತರ ಸಂದರ್ಭಗಳಲ್ಲೂ ಉತ್ಸವಗಳನ್ನು ಹೆಗಲ ಮೇಲೆ ಹೊತ್ತು ದೇವಸ್ಥಾನದ ಎಂಟು ಮೂಲೆಗಳಲ್ಲೂ ಪ್ರದಕ್ಷಿಣೆ ಮಾಡಿಕೊಂಡು ದೇವರ ಸೇವೆ ಸಲ್ಲಿಸುತಿದ್ದಾರೆ. ಇದಕ್ಕೆ ಅಡ್ಡೆಗಾರರು ಗೌರವಧನ ಪಡೆಯುತ್ತಿದ್ದಾರೆ. ಆದರೆ, ಇತ್ತೀಚೆಗೆ ಶಾಸಕರು ಮಧ್ಯೆ ಪ್ರವೇಶಿಸಿ, ದೇಗುಲದ ಸಂಪ್ರದಾಯ ಮುರಿದು ದೇವರ ಹಾಗೂ ಉತ್ಸವಗಳ ಅಡ್ಡೆ ಹೊರಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಟೆಂಡರ್ ಕರೆಯುವ ಕೆಲಸಕ್ಕೆ ಮುಂದಾಗಿರುವುದನ್ನು ಖಂಡಿಸುತ್ತೇವೆ. ತಕ್ಷಣವೇ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಹಿಂದಿನಿಂದ ನಡೆದುಕೊಂಡು ಬಂದಿರುವ ದೇವಸ್ಥಾನದ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಎಲ್ಲರೂ ನಡೆದು ಕೊಳ್ಳಬೇಕು ಎಂದರು.
ಯಾವುದೇ ವಿಚಾರವನ್ನೂ ಸಂಬಂಧಿಸಿದವರೊಂದಿಗೆ ಚರ್ಚಿಸದೆ ಏಕಪಕ್ಷಿವಾಗಿ ನಿರ್ಧಾರ ತೆಗೆದು ಕೊಳ್ಳುತ್ತಿದ್ದಾರೆ. ಬೇಲೂರಿನ ಇತಿಹಾಸದ ಬಗ್ಗೆ ತಿಳಿದುಕೊಂಡು ನಂತರ ಚರ್ಚಿಸಿ ನಿರ್ಧಾರ ಬರಬೇಕು. ದೇಗುಲದ ಅಡ್ಡೆಗಾರರ ಟೆಂಡರ್ ವಿಚಾರವನ್ನು ಕೈಬಿಟ್ಟು ಹಿಂದಿನ ಸಂಪ್ರದಾಯವನ್ನೆ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಬೇಲೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಸೇರಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚನ್ನಕೇಶವಸ್ವಾಮಿ ದೇಗುಲ ಅಡ್ಡೆಗಾರರ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಶೈಲೇಶ್(ಶ್ರೀನಿವಾಸ್)ಮಾತನಾಡಿ, ದೇವಸ್ಥಾನಕ್ಕೆ ಸಂಬಂಧಿಸಿದ ಪುಸ್ತಕದಲ್ಲಿ ಇರುವಂತೆ ಕಾರ್ಯ ನಿರ್ವಹಿಸಲು ಸಹಕರಿಸಬೇಕು. ರಾಜಕಾರಣದ ಒತ್ತಡದಿಂದ ಅಧಿಕಾರಿಗಳು ಅಡ್ಡೆ ಹೊರುವುದಕ್ಕೆ ಟೆಂಡರ್ ಕರೆಯುತ್ತಿದ್ದಾರೆ, ನಾಳೆ ಅರ್ಚಕರು, ಸೇವಾರ್ಥದಾರರು, ರಥಕ್ಕೆ ಸಂಬಂಧಿಸಿದ ಕೆಲಸಗಾರರಿಗೂ ಟೆಂಡರು ಕರೆಯುವ ಕೆಲಸ ನಡೆಯಬಹುದಾಗಿದೆ. ಅಡ್ಡೆ ಹೊರುವವರಿಗೆ ಯಾವುದೇ ಸಂಬಳ ನೀಡುತ್ತಿಲ್ಲ. ಕೇವಲ ಗೌರವಧನ ಪಡೆದು ದೇವರ ಸೇವೆ ಎಂದು ಕೆಲಸ ನಿರ್ವಹಿಸುತಿದ್ದೇವೆ. ತಕ್ಷಣ ಅಡ್ಡೆಗಾರರ ಟೆಂಡರ್ ಕೈಬಿಟ್ಟು ದೇವಸ್ಥಾನದ ಸಂಪ್ರದಾಯಕ್ಕೆ ದಾರಿ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.
ಅಡ್ಡೆ ಟೆಂಡರ್ ಕೈಬಿಡುವಂತೆ ಆಗ್ರಹಿಸಿ ಅಡ್ಡೆಗಾರರು ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಗ್ರೇಡ್-2 ಅಶೋಕ್‌ಕುಮಾರ್ ಮೂಲಕ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಪ್ರಮೋದ್, ಮಾಜಿ ಸದಸ್ಯ ರಂಗನಾಥ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಿಯಾ ಕೇಶವ, ಅಡ್ಡೆಗಾರರ ಸಂಘದ ಕಾರ್ಯದರ್ಶಿ ವೆಂಕಟೇಶ್, ಮೋಹನ್ ಕುಮಾರ್, ಕೋಳಿ ಚಂದ್ರು, ವಸಂತ್, ವೆಂಕಟೇಶ್, ಧರ್ಮೇಗೌಡ ಇತರರಿದ್ದರು.