ಸಂಕೇಶ್ವರ: ಸಹಕಾರ ಸಂಘಗಳ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮನವಿ ಮಾಡಿದರು.
ಪಟ್ಟಣದ ಶಂಕಲಿಂಗ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ, ಇಲ್ಲಿ ನಾವಾಗೆ ಬಂದಿಲ್ಲ. ಹುಕ್ಕೇರಿ ತಾಲೂಕಿನ ಸಂಘ ಸಂಸ್ಥೆಗಳ ಸದಸ್ಯರು ನಮ್ಮ ಕಡೆಗೆ ಬಂದು ನೋವು ಹಂಚಿಕೊಂಡಿದ್ದಾರೆ. ನಮ್ಮ ಜತೆಗೂಡಿದ ಸದಸ್ಯರ ರಕ್ಷಣೆಗಾಗಿ ಚುನಾವಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮುಂಬರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಗೆ ದಿ.ಅಪ್ಪಣಗೌಡ ಪಾಟೀಲ ಸಹಕಾರ ಪೆನಲ್ ನಾಮಕರಣ ಮಾಡುವ ಮೂಲಕ ಇಂದಿನಿಂದಲೇ ಪ್ರಚಾರ ಆರಂಭಿಸಲಾಗುವುದು.
ಸತೀಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಹೊಂದಾಣಿಕೆ ಅವಧಿ ಮುಗಿದು ಹೋಗಿದ್ದು, ಚುನಾವಣಾ ಕಣಕ್ಕೆ ಈಗಿರುವ ಅಭ್ಯರ್ಥಿಗಳನ್ನೆ ಕಣಕ್ಕಿಳಿಸಿ ಗೆಲ್ಲಿಸಲು ಶ್ರಮಿಸಲಾಗುವುದು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಹಿರಿಯರು ಕಟ್ಟಿ ಬೆಳೆಸಿದ ಸಂಘ ಸಂಸ್ಥೆಗಳು ಜನರಿಗೆ ಅನುಕೂಲತೆ ಒದಗಿಸಿದೆ. ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದು ಮನೆ-ಮನೆಗೆ ತೆರಳಿ ಸಮಸ್ಯೆ ಆಲಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಜಯವಂತ ಬಾಟಲೆ, ಅಮರ ನಲವಡೆ, ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಶಂಕರರಾವ ಹೆಗಡೆ, ಅಜಿತ್ ಕರಜಗಿ, ಕುನಾಲ ಪಾಟೀಲ, ಪವನ ಪಾಟೀಲ, ಅಭಿಜಿತ್ ಕುರಣಕರ, ರಾಜೇಶ ಗಾಯಕವಾಡ ಇತರರಿದ್ದರು.