ಜಿಲ್ಲೆ

ಬೇಡಿಕೆ ಈಡೇರಿಸಿದ ಬಳಿಕವೇ ಕಬ್ಬು ನುರಿಸಲಿ

ಹಳಿಯಾಳ: ಪ್ರಸ್ತುತ ಸಾಲಿನಲ್ಲಿ ಕಬ್ಬಿಗೆ ದರ ನಿಗದಿಪಡಿಸುವುದು, ದ್ವಿಪಕ್ಷೀಯ ಒಪ್ಪಂದ ಹಾಗೂ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದ ಬಳಿಕವೇ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ಉಪವಿಭಾಗಾಧಿಕಾರಿ ಕನಿಷ್ಕ್ ಅವರಿಗೆ ಕಬ್ಬು ಬೆಳೆಗಾರರ ಸಂಘದವರು ಆಗ್ರಹಿಸಿದರು.

ಪಟ್ಟಣದ ಆಡಳಿತ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ರೈತರು ನಿರ್ಧಾರವನ್ನು ತಿಳಿಸಿದರು. ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಮಾತನಾಡಿ, ಸರ್ಕಾರದ ನಿಯಮದಂತೆ ರೈತರು ಹಾಗೂ ಕಾರ್ಖಾನೆಯವರ ಒಪ್ಪಂದದ ಬಳಿಕವೇ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಆದರೆ, ಹಳಿಯಾಳದಲ್ಲಿ ಮಾತ್ರ ಕಾರ್ಖಾನೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾರ್ಖಾನೆ ವ್ಯಾಪ್ತಿಯ 35 ಸಾವಿರ ರೈತರ ಸಮಸ್ಯೆ ಬಗೆಹರಿಸದೆ, ನಿಗದಿತ ಸಮಯಕ್ಕೂ ಮೊದಲೇ ತರಾತುರಿಯಲ್ಲಿ ಕಾರ್ಖಾನೆ ಆರಂಭಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ರೈತ ಎನ್.ಎಸ್. ಜಿವೋಜಿ ಮಾತನಾಡಿ, ಎಫ್‌ಆರ್‌ಪಿ ವ್ಯತ್ಯಾಸ, ಕಬ್ಬು ಕಟಾವು ಮತ್ತು ಸಾಗಣೆ ದರದಲ್ಲಿ ನಿಯಮಕ್ಕಿಂತ ಹೆಚ್ಚು ವಸೂಲಿ ಹಾಗೂ ಸಿನಿಯಾರಿಟಿ ಪಟ್ಟಿ ಬಿಡುಗಡೆ ಸಂಬಂಧಿಸಿ ಈ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ನಿರ್ಣಯದ ಹೊರತಾಗಿಯೂ ಕಾರ್ಖಾನೆ ಪ್ರಾರಂಭಕ್ಕೆ ತರಾತುರಿ ನಡೆಸುತ್ತಿರುವುದು ಮತ್ತೆ ರೈತರನ್ನು ವಂಚಿಸುವ ಉದ್ದೇಶವೇ ಆಗಿದೆ ಎಂದು ಕಿಡಿಕಾರಿದರು.

ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರ ಭರವಸೆಯಂತೆ ಕಾರ್ಖಾನೆ ಪ್ರಾರಂಭಕ್ಕೂ ಮುನ್ನ ಹಳಿಯಾಳದಲ್ಲಿ ರೈತರ ಸಭೆ ನಡೆಸಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಅದರಂತೆ ನ.16ರ ನಂತರ ಕಾರ್ಖಾನೆ ಪ್ರಾರಂಭಿಸಲು ತಿಳಿಸಲಾಗಿತ್ತು. ಆದರೆ, ಈಗ ನ.8ರಂದು ಕಾರ್ಖಾನೆ ಪ್ರಾರಂಭಿಸುತ್ತಿರುವ ಕುರಿತು ರೈತರ ಆಕ್ಷೇಪವಿದೆ ಎಂದರು.

ಸಭೆಯಲ್ಲಿ ರೈತರ ಮನವೊಲಿಸಲು ಎಸಿ ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಲಿ ಸಭೆ ನಡೆಸಿ ಕಾರ್ಖಾನೆ ಆರಂಭಿಸುವಂತೆ ರೈತರು ಪಟ್ಟು ಹಿಡಿದರು. ಅದರಂತೆ ನ.9ರಂದು ತಾಲೂಕಾಡಳಿತ ಕಚೇರಿಯಲ್ಲಿ ಸಭೆ ನಡೆಸುವ ಬಗ್ಗೆ ನೀಡಿದ ಭರವಸೆಗೆ ರೈತರು ಒಪ್ಪಿಗೆ ಸೂಚಿಸಿದರು.

ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ, ಸಿಪಿಐ ಜಯಪಾಲ ಪಾಟೀಲ್, ಕಬ್ಬು ಬೆಳೆಗಾರರ ಸಂಘದ ಅಶೋಕ ಮೇಟಿ, ಎಂ.ವಿ. ಘಾಡಿ, ಅಪ್ಪಾರಾವ ಪೂಜಾರಿ, ಗಿರೀಶ ಟೋಸುರ, ಸಾತೂರಿ ಗೊಡಿಮನಿ, ಬಸವರಾಜ ಬೆಂಡಿಗೆರಿಮಠ, ಸುರೇಶ ಕೊಕಿತ್ಕರ ಇತರರಿದ್ದರು.