ಮಹಾಲಿಂಗಪುರ: ನೀವು ಶಾಲೆ, ಆಸ್ಪತ್ರೆಗಳನ್ನು ಆರಂಭಿಸಿ ಜನಸೇವೆ ಮಾಡಿ, ರಾಷ್ಟ್ರ ಸೇವೆ ಮಾಡಿ ಎಂದು ಸ್ವಾಮಿ ವಿವೇಕಾನಂದರು ಸನ್ಯಾಸಿಗಳಿಗೆ ಕರೆಕೊಟ್ಟಿದ್ದರು ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮಿಗಳು ಹೇಳಿದರು.
ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿವೇಕಾನಂದರು ಕೇವಲ ಧರ್ಮ ಪ್ರಚಾರಕ್ಕಾಗಿ ಅಮೆರಿಕಕ್ಕೆ ಹೋಗಲಿಲ್ಲ. ಅಲ್ಲಿಯ ಸಂಪತ್ತನ್ನು ತಂದು ಅದನ್ನು ಭಾರತೀಯರನ್ನು ಜಾಗೃತಗೊಳಿಸುವ ಉದ್ದೇಶದಿಂದ ಹೋಗಿದ್ದರು. ದೇಶ ಸ್ವಚ್ಛವಾಗಿಡುವುದೂ ಒಂದು ದೇಶ ಸೇವೆ. ನಿಡಸೋಸಿಯಲ್ಲಿ ಜೀರೋ ವೇಸ್ಟ್ ಕ್ಯಾಂಪಸ್ ಮಾಡಿದ್ದೇವೆ ಎಂದು ತಿಳಿಸಿದರು.
ಭಾಷಣಕಾರ ಅಕ್ಷಯ ಗೋಖಲೆ ಮಾತನಾಡಿ, ವಿವೇಕಾನಂದರು ಚಿಕ್ಕವರಾಗಿದ್ದಾಗಲೇ ಪುಸ್ತಕವೊಂದರ ಪ್ರಭಾವದಿಂದ ನಾನು ಜಗತ್ತಿಗೇ ಏನನ್ನಾದರೂ ಕೊಡಬೇಕು ಮತ್ತು ಜಗತ್ತಿನಿಂದ ಏನನ್ನಾದರೂ ತರಬೇಕು ಎಂಬ ಸಂಕಲ್ಪ ಮಾಡಿದ್ದರು. ಮುಂದೆ ತಾಯಿಯು ಭಗವದ್ಗೀತೆ ಸಾರವನ್ನು ವಿವೇಕಾನಂದರಿಗೆ ತಿಳಿಸಿದಾಗ ಕ್ರಾಂತಿಕಾರಿ ಆಗುವುದು ಅನಿವಾರ್ಯ ಎಂಬುದು ಅವರಿಗೆ ಮನದಟ್ಟಾಯಿತು ಎಂದರು.
ಶಾಲೆ ವ್ಯವಸ್ಥಾಪಕ ವಿವೇಕ ಢಪಳಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಿಗೆ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ, ಚಾಂಪಿಯನ್ ಹೌಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಲೂಯಿಸ್ ಬುರೆಟ್ಟೋ ಇತರರಿದ್ದರು.
ವಿದ್ಯಾರ್ಥಿನಿ ಅನುಷಾ ಬಡಿಗೇರ ನಿರೂಪಿಸಿದರು. ಸನ್ನಿಧಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ನಂದಿತಾ ಚಿಮ್ಮಡ ಭಗವದ್ಗೀತೆಯ 12ನೇ ಅಧ್ಯಯನದ ಶ್ಲೋಕಗಳನ್ನು ಪಠಿಸಿದರು.