ವಿರಾಜಪೇಟೆ: ಕಾವೇರಿ ಪದವಿಪೂರ್ವ ಕಾಲೇಜು ವಿರಾಜಪೇಟೆ 2024-2025ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಸಮಾರಂಭ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಪಾಲ್ಗೊಂಡು, ನೂತನ ಪದಾಧಿಕಾರಿಗಳಿಗೆ ಹಾಗೂ ತರಗತಿ ಪ್ರತಿನಿಧಿಗಳಿಗೆ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯೋಗ, ಜ್ಞಾನ, ಏಕಾಗ್ರತೆಯ ಮೂಲಕ ಗುರಿಸಾಧನೆಯತ್ತ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎನ್.ಎಂ ನಾಣಯ್ಯ, ಮಕ್ಕಳು ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಅಳವಡಿಸಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಪಿ. ದಮಯಂತಿ, ಪದವಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್. ಸಲ್ಡಾನ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿ ಪಮಿತಾ, ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.