ಜಿಲ್ಲೆ

ವಿದ್ಯಾರ್ಥಿಗಳು ಕ್ರಿಯಾಶೀಲ ಮನೋಭಾವ ಬೆಳೆಸಿಕೊಳ್ಳಲಿ

ರಾಜಣ್ಣ

ಮದ್ದೂರು: ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರಿಯಾಶೀಲ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು ಎಂದು ಮದ್ದೂರು ತಾಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಪದ್ಮಾ ಶ್ರೀನಿವಾಸ್ ಕರೆ ನೀಡಿದರು.


ತಾಲೂಕಿನ ಕೌಡ್ಲೆ ಗ್ರಾಮದ ಜನತಾ ವಿದ್ಯಾಸಂಸ್ಥೆಯ ಜೆ.ಪಿ.ಸ್ಮಾರಕ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿಗಳು ಹಲವು ಪ್ರತಿಭೆ ಹೊಂದಿದ್ದು, ಅವುಗಳನ್ನು ಹೊರತೆಗೆಯುವ ಮೂಲಕ ಸಾಧನೆ ಮಾಡುವಂತೆ ಶಿಕ್ಷಕರು, ಪಾಲಕರು ಮಕ್ಕಳನ್ನು ಪ್ರೇರೇಪಿಸಬೇಕು. ಇತ್ತೀಚೆಗೆ ಮಕ್ಕಳು ಮೊಬೈಲ್ ದಾಸರಾಗುವ ಮೂಲಕ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕ್ರೀಡೆ, ಸಾಹಿತ್ಯ, ಜಾನಪದ ಮತ್ತು ರಂಗಕಲೆಯನ್ನು ಮರೆಯುತ್ತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಭಾರತದ ಭವ್ಯ ಪರಂಪರೆಯ ಸಂಸ್ಕೃತಿ ಮತ್ತು ಆಚಾರ- ವಿಚಾರವನ್ನು ಉಳಿಸಿಬೆಳೆಸಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸದ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕರು ಸಹಕಾರ ನೀಡಬೇಕು ಎಂದರು.

ಅಭಿನಂದನೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಡ್ಯ ತಾಲೂಕು ಕಸಾಪ ಮಹಿಳಾ ಅಧ್ಯಕ್ಷೆ ಸುಜಾತಾ ಕೃಷ್ಣ, ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಚ.ಮ.ಉಮೇಶ್, ಕನ್ನಡಪರ ಹೋರಾಟಗಾರ ಯೋಗೇಶ್ ಕೋಣನಹಳ್ಳಿ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಭಿಕರನ್ನು ರಂಜಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೌಡ್ಲೆ ಚನ್ನಪ್ಪ, ಸಂಸ್ಥೆಯ ಅಧ್ಯಕ್ಷ ಎಂ.ನಾರಾಯಣಗೌಡ, ಸದಸ್ಯರಾದ ಚಿನ್ನು, ಗಂಗರಸಯ್ಯ, ಸಹಕಾರ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.