ಜಿಲ್ಲೆ

ವಿದ್ಯಾರ್ಥಿಗಳು ಸ್ಪರ್ಧಾಮನೋಭಾವ ಬೆಳೆಸಿಕೊಳ್ಳಲಿ

ಪ್ರಸಿನ್ ಕೆ.ಆರ್

ಮದ್ದೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದೇ ರೀತಿಯ ಹಿಂಜರಿಕೆ ಮನೋಭಾವನೆಯನ್ನು ಇಟ್ಟುಕೊಳ್ಳದೆ, ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಂಡು ಗುರಿಯನ್ನು ತಲುಪಬೇಕು ಎಂದು ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯ ಮದ್ದೂರು ಹಾಗೂ ಎಚ್.ಕೆ.ವೀರಣ್ಣಗೌಡ ಪದವಿ ಮತ್ತು ಪದವಿ ಪೂರ್ವ ಕಾಲೇಜು ಮದ್ದೂರು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025ರ ಕ್ಯಾಲೆಂಡರ್ ಬಿಡುಗಡೆ ಮತ್ತು ಅತಿಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉನ್ನತ ಹುದ್ದೆಯನ್ನು ಅಲಂಕರಿಸುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ, ಸಾಕಷ್ಟು ಪರಿಶ್ರಮವಿರುತ್ತದೆ ಹಾಗಾಗಿ ಹತ್ತು ವರ್ಷ ನೀವು ಚೆನ್ನಾಗಿ ಓದಿದರೆ, ಮುಂದಿನ 60 ವರ್ಷಗಳ ಕಾಲ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎಂದು ಹೇಳಿದರು.

ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಿಬಿಸಿ ಶಿವಾನಂದ ಮೂರ್ತಿ, ನಾನು ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ವ್ಯವಸಾಯದ ಜತೆ ಜತೆಗೆ ಕುಟುಂಬದ ಸಂಕಷ್ಟಗಳನ್ನು ಸಹಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಹುದ್ದೆ ಅಲಂಕರಿಸಿದ್ದೇನೆ. ಯಾರಲ್ಲಿ ದೃಢಸಂಕಲ್ಪ, ನಿರಂತರ ಪರಿಶ್ರಮ ಇರುತ್ತದೆಯೋ, ಅವರು ಖಂಡಿತವಾಗಿಯೂ ಗುರಿ ತಲುಪುತ್ತಾರೆ ಎಂದರು.

ಜೀವನದಲ್ಲಿ ಬರುವ ಸಣ್ಣಪುಟ್ಟ ಕಷ್ಟಗಳನ್ನ ಬದಿಗಿಟ್ಟು, ಕೇವಲ ಗುರಿಯೊಂದನ್ನು ಮಾತ್ರ ಸಾಧಿಸುವ ಛಲವನ್ನು ಬೆಳೆಸಿಕೊಳ್ಳಿ ಎಂದರು.

ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ ಮಾತನಾಡಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಅಭಿನಂದನ ಪತ್ರ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಟಿ ಚಂದು ಅಭಿನಂದಿಸಿದರು.

ಸಂಸ್ಥೆಯ ಅಧ್ಯಕ್ಷ ಸ್ವರೂಪ್‌ಚಂದ್, ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಖಜಾಂಚಿ ಶಿವರಾಮು, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಮತ್ತು ಸುರೇಂದ್ರ ಇದ್ದರು.