ಜಿಲ್ಲೆ

ವಿದ್ಯಾರ್ಥಿಗಳು ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳಲಿ

ಹುಬ್ಬಳ್ಳಿ: ವಿದ್ಯಾರ್ಥಿಗಳು ಯೋಗದ ಮಹತ್ವವನ್ನು ಅರಿತು ತಮ್ಮ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಬಾಳಬೇಕು ಎಂದು ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿ ಯು.ಎನ್. ಹಜಾರೆ ಹೇಳಿದರು.

ಇಲ್ಲಿನ ಉಣಕಲ್ಲ ಐ.ಜಿ. ಹಿರೇಗೌಡರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯೋಗಾಸನ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಅನೇಕ ವಿದ್ಯಾರ್ಥಿಗಳು ಮೊಬೈಲ್ ಫೋನ್ ದಾಸರಾಗಿದ್ದಾರೆ. ಆಟಗಳನ್ನು ಮೈದಾನದಲ್ಲಿ ಆಡಬೇಕೆ ಹೊರತು ಮೊಬೈಲ್​ನಲ್ಲಿ ಅಲ್ಲ. ಯೋಗದಿಂದ ಹಲವು ಪ್ರಯೋಜನಗಳು ಇವೆ ಎಂದರು.

ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಸೋಮನಗೌಡ ಎಂ. ಪಾಟೀಲ ಮಾತನಾಡಿದರು.

25 ಕಾಲೇಜುಗಳು ಭಾಗಿ:

ಧಾರವಾಡ ಜಿಲ್ಲೆಯ 25ಕ್ಕೂ ಹೆಚ್ಚು ಪಪೂ ಕಾಲೇಜುಗಳ 50ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿ ಬಹುಮಾನ ಪಡೆದುಕೊಂಡರು.

ಬಾಲಕಿಯರ ವಿಭಾಗದಲ್ಲಿ ಧಾರವಾಡ ಆರ್​ಎಲ್​ಎಸ್ ಕಾಲೇಜಿನ ಚೈತ್ರಾ ಬಿ. ಡೊಳ್ಳಿನ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಧಾರವಾಡದ ಸಿ.ವಿ. ರಾಮನ್ ಕಾಲೇಜಿನ ರಕ್ಷಿತಾ ಇಟ್ಟಿ ದ್ವಿತೀಯ, ಹುಬ್ಬಳ್ಳಿಯ ಎಸ್.ಕೆ. ಕಲಾ ಕಾಲೇಜಿನ ರಾಧಿಕಾ ಅಳವಂಡಿ ತೃತೀಯ, ಧಾರವಾಡದ ಸತ್ಯಸಾಯಿ ಕಾಲೇಜಿನ ಸ್ನೇಹ ತುಪ್ಪದ ನಾಲ್ಕನೇ, ಕುಂದಗೋಳದ ಹರ್ಬಲ್ ಕಾಲೇಜಿನ ಗೀತಾ ಬಿ, ಐದನೇ ಸ್ಥಾನ ಪಡೆದರು.

ರಿದಮಿಕ್ ಯೋಗಾದಲ್ಲಿ ಹೆಬ್ಬಳ್ಳಿ ಮುರಾರ್ಜಿ ವಸತಿ ಕಾಲೇಜಿನ ರಾಧಿಕಾ ಹೊಸಳ್ಳಿ ಪ್ರಥಮ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ಹುಬ್ಬಳ್ಳಿಯ ಎಸ್.ಕೆ. ಕಲಾ ಕಾಲೇಜಿನ ಶಿವಾನಂದ ಕುಂದಗೋಳ ಪ್ರಥಮ, ಧಾರವಾಡದ ಕೆಪಿಎಸ್ ಕಾಲೇಜಿನ ಅಭಿಷೇಕ ಪಲ್ಲೇದ ದ್ವಿತೀಯ, ಧಾರವಾಡದ ಬೇಂದ್ರೆ ಕಾಲೇಜಿನ ವಿಶ್ವನಾಥ ರೆಡ್ಡಿ ತೃತೀಯ, ಧಾರವಾಡ ಸ್ವಾಮಿ ವಿವೇಕಾನಂದ ಕಾಲೇಜಿನ ಸಂದೀಪ ರೆಡ್ಡಿ ನಾಲ್ಕನೇ, ಧಾರವಾಡ ಕೆಎಲ್​ಇ ಕಾಲೇಜಿನ ಪ್ರಜ್ವಲ್ ಸೋರಣಕಿ ಐದನೇ ಸ್ಥಾನ, ರಿದಮಿಕ್ ಯೋಗಾಸನದಲ್ಲಿ ಸಂಶಿಯ ಕೆಎಲ್​ಇ ಕಾಲೇಜಿನ ಗುರುನಾಥ ಹಿರೇಮಠ ಪ್ರಥಮ ಹಾಗೂ ಆರ್ಟಿಸ್ಟಿಕ್ ಯೋಗಾಸನದಲ್ಲಿ ಕುಂದಗೋಳದ ಹರ್ಬಲ್ ಕಾಲೇಜಿನ ನಾಗೇಶ ನಾಗಲಿಂಗನವರ ಪ್ರಥಮ ಸ್ಥಾನ ಪಡೆದರು.

ಯೋಗ ಶಿಕ್ಷಕರಾದ ಈರಯ್ಯ ಗದಗಿಮಠ, ವಿನಾಯಕ ಕೆ. ಹಾಗೂ ಸರೋಜಾ ಶೆಟ್ಟರ್ ನಿರ್ಣಾಯಕರಾಗಿದ್ದರು.

ಕಾಲೇಜಿನ ಸದಸ್ಯ ಮೋಹನ ಬಡ್ನಿ, ಆರ್.ವಿ. ಪಾಟೀಲ, ಆರ್.ಎಸ್. ಹನ್ನಿ, ಕಾಲೇಜಿನ ಪ್ರಾಚಾರ್ಯ ಮೇಘಾ ಎಂ.ಜೆ. ಉಪಸ್ಥಿತರಿದ್ದರು. ಕಾರ್ಯದರ್ಶಿ ಶಿವಕುಮಾರಗೌಡ ಬಿ.ಜಿ. ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ವೀರೇಶ್ವರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕುರ್ತಕೋಟಿ ಸ್ವಾಗತಿಸಿದರು. ಗಣೇಶ ಮಾಂಡೇಕರ ವಂದಿಸಿದರು.