ಜಿಲ್ಲೆ

ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಲಿ

Mysuru - Desk - Ravikumar

ಬೆಟ್ಟದಪುರ: ವಿದ್ಯಾರ್ಥಿಗಳು ಕಲಿಕೆ ಜತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಬೆಟ್ಟದಪುರ ಕಚೇರಿ ಯೋಜನಾಧಿಕಾರಿ ಸಂತೋಷ್ ಕುಮಾರ್ ಜೈನ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮ್ಮಿಲನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚೇತನ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಜತೆಗೆ ಹಲವು ಉಚಿತ ಸವಲತ್ತುಗಳು ದೊರೆಯುತ್ತಿದೆ. ಹಾಗಾಗಿ, ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ತಿಳಿಸಿದರು.

ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯತ್ತ ಹೆಚ್ಚು ಆಸಕ್ತಿವಹಿಸಿ ಸಾಧನೆಯ ಗುರಿ ತಲುಪಬೇಕು. ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರದೇಶಕ್ಕೆ ಆಗಮಿಸಲು ನಿಗದಿತ ಸಮಯಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗಿದ್ದು, ಮುಂದೆ ಅಗತ್ಯಕ್ಕನುಗುಣವಾಗಿ ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದರು.

ಈ ವೇಳೆ ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಹಾಗೂ ಶಾಲೆಯ ಶಿಕ್ಷಕರು ಅತಿಥಿ ಶಿಕ್ಷಕರು, ಅಡುಗೆ ಸಿಬ್ಬಂದಿಯನ್ನು ಗ್ರಾಮದ ಭವಾನಿ ಷಣ್ಮುಖಾರಾಧ್ಯ ಕುಟುಂಬದಿಂದ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ರಂಜಿಸಿತು. ಎಸ್‌ಎಸ್‌ಎಲ್‌ಎಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಬಿ.ಬಿ. ಕೀರ್ತಿಕುಮಾರ್ ಕುಟುಂಬದಿಂದ ಹಾಗೂ ಶಾಲೆಯ ಆದರ್ಶ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಬಿ.ಸಿ. ರಾಘವೇಂದ್ರ ಕುಟುಂಬದಿಂದ, ಏಳನೇ ತರಗತಿಯ ಮೂವರು ಪ್ರತಿಭಾನ್ವಿತರನ್ನು ಮೈಸೂರಿನ ವಕೀಲ ಎಸ್.ವಿಶ್ವರಾಧ್ಯ ಕುಟುಂಬದಿಂದ ಹಾಗೂ ಒಂದರಿಂದ ಏಳನೇ ತರಗತಿವರೆಗಿನ ಪ್ರತಿಭಾನ್ವಿತ ಓರ್ವ ವಿದ್ಯಾರ್ಥಿಯನ್ನು ಷಣ್ಮುಖಾರಾಧ್ಯ ಕುಟುಂಬದಿಂದ ಬಹುಮಾನ ವಿತರಿಸಿ ಗೌರವಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಿ.ಪಿ.ಯೋಗೇಶ್ ಕುಟುಂಬದವರಿಂದ ಬಹುಮಾನ ನೀಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಸ್. ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಜ್ಯೋತಿ ರವಿಕುಮಾರ್, ರುಕ್ಕಣ್ಣ, ಜಗದೀಶ್, ಬಡ್ತಿಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಈ.ಬಿ ವೆಂಕಟೇಶ್, ದಾನಿಗಳಾದ ಚನ್ನಯ್ಯ, ಎಸ್‌ಡಿಎಂಸಿ ಉಪಾಧ್ಯಕ್ಷೆ ಲೀಲಾವತಿ ಹಾಗೂ ಸದಸ್ಯರು, ಶ್ರೀ ಬಸವೇಶ್ವರ ಟ್ರಸ್ಟ್ ಅಧ್ಯಕ್ಷರಾದ ಬಿ.ಇ.ರವಿಕುಮಾರ್, ಕಾರ್ಯದರ್ಶಿ ಬಿ.ಎಚ್. ಬಸವೇಗೌಡ, ಖಜಾಂಚಿ ಬಿ.ಎಸ್. ಸತೀಶ್ ಆರಾಧ್ಯ ಮತ್ತು ಸಂಚಾಲಕರು, ಮುಖ್ಯ ಶಿಕ್ಷಕ ಚನ್ನೇಗೌಡ, ಶಿಕ್ಷಕರಾದ ವಿಶುಕುಮಾರ್, ಯೋಗೇಶ್, ಕೃಷ್ಣ, ಅಡುಗೆ ಸಿಬ್ಬಂದಿ, ಸ್ಥಳೀಯ ಸಂಘ ಸಂಸ್ಥೆ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.