ಜಿಲ್ಲೆ

ಭಯ ಹುಟ್ಟಿಸುವಂಥ ಕ್ರಮ ರಾಜ್ಯ ಸರ್ಕಾರ ಕೈಗೊಳ್ಳಲಿ

ಹುಬ್ಬಳ್ಳಿ: ಬಾಲಕಿ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವುದು ರಾಕ್ಷಸಿ ಕೃತ್ಯ. ಇಂತಹ ಕೃತ್ಯ ಎಸಗುವವರಿಗೆ ಭಯ ಹುಟ್ಟಿಸುವಂಥ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದ ಸಬ್‌ಜೈಲ್ ಹತ್ತಿರದ ಮೃತ ಬಾಲಕಿಯ ಮನೆಗೆ ಮಂಗಳವಾರ ಭೇಟಿ ನೀಡಿದ ಅವರು, ಬಾಲಕಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೃತ ಬಾಲಕಿ ಕುಟುಂಬದವರು ಬಡವರಾಗಿದ್ದು, ರಾಜ್ಯ ಸರ್ಕಾರ ಹತ್ತು ಲಕ್ಷ ಘೋಷಣೆ ಮಾಡಿದೆ. 25 ಲಕ್ಷ ರೂ. ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿ, ಬೆಂಗಳೂರು ಸೇರಿ ಎಲ್ಲ ಕಡೆ ಇಂತಹ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಬಿಗಿ ಆಡಳಿತವಿಲ್ಲ. ಇದೇ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಆರೋಪಿಸಿದರು.

ಆರೋಪಿ ಗಾಂಜಾ ಸೇವನೆ ಮಾಡಿ ಇಂತಹ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲ ನಗರ ಪ್ರದೇಶಗಳಲ್ಲೂ ಗಾಂಜಾ ತಡೆಗೆ ಮುಂದಾಗಬೇಕು. ಗಾಂಜಾದ ಮೂಲ ನಾಶ ಮಾಡಬೇಕು. ಇದಕ್ಕೆ ರಾಜ್ಯ ಸರ್ಕಾರ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಬೇಕು. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.

ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹೊಡೆದಿರುವುದು ಒಳ್ಳೆಯ ಕಾರ್ಯ. ಬರ್ಬರವಾಗಿ ಹತ್ಯೆ ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡಿರುವುದನ್ನು ಶ್ಲಾಘಿಸಿ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಿಐಎಲ್ ಕುರಿತು ನ್ಯಾಯಾಲಯ ತೀರ್ಮಾನ ಮಾಡಲಿದೆ ಎಂದರು.