ಜಿಲ್ಲೆ

ಪತ್ರಿಕಾ ವಿತರಕರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಲಿ

ಹುಬ್ಬಳ್ಳಿ: ಮನ-ಮನೆ ಗೆದ್ದಿರುವ ಪತ್ರಿಕೆ ವಿತರಕರಿಗೆ ಸರ್ಕಾರಗಳು ಸ್ಪಂದಿಸಬೇಕು. ಇನ್ಶೂರೆನ್ಸ್ ಮಾಡಿಕೊಡಬೇಕು ಹಾಗೂ ರಾಜ್ಯೋತ್ಸವ, ಮಾಧ್ಯಮ ಅಕಾಡೆಮಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಇವರಿಗೆ ಮೀಸಲಿಡಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಹುಬ್ಬಳ್ಳಿ ಪತ್ರಿಕಾ ಮಾರಾಟಗಾರರ ಸಂಘದ ವತಿಯಿಂದ ಇಲ್ಲಿಯ ಭವಾನಿನಗರದ ರಾಘವೇಂದ್ರ ಸ್ವಾಮಿಗಳ ಮಠದ ಸುಜಯೀಂದ್ರ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಷ್ಟೇ ನೋವು-ಸಂಕಷ್ಟಗಳಿದ್ದರೂ ದಿನ ಬೆಳಗಾದರೆ ಪತ್ರಿಕಾ ವಿತರಕರು ಕಾಯಕವೇ ಕೈಲಾಸವೆಂಬ ತತ್ವದಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೃತ್ತಿಯೊಂದಿಗೆ ತಮ್ಮ ಕುಟುಂಬವನ್ನು ಸಲಹುವ ಇವರು, ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕಿದ್ದಾರೆ. ಅನಾರೋಗ್ಯಕ್ಕೆ ತುತ್ತಾದರೂ ತಮ್ಮ ಕೆಲಸವನ್ನು ಅವರು ಬಿಡುವುದಿಲ್ಲ. ಡಿಜಿಟಲ್ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತದೆ ಎಂಬುದೆಲ್ಲ ಸುಳ್ಳು. ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಇವರ ಕಾರ್ಯ ಮನಗಂಡು ಕಾರ್ಮಿಕರ ಕಾರ್ಡ್ ವಿತರಿಸಿರುವುದಕ್ಕೆ ಅಭಿನಂದನೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪತ್ರಿಕಾ ವಿತರಕರ ಮಹತ್ವದ ಜವಾಬ್ದಾರಿ ಅರಿತಿದ್ದೇನೆ. ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿ ಧ್ವನಿ ಎತ್ತಿ ಇವರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಿ ಪರಿಹರಿಸುವೆ ಎಂದರು.
191ವರ್ಷಗಳ ಇತಿಹಾಸವನ್ನು ಪತ್ರಿಕಾ ವಿತರಕರು ಹೊಂದಿದ್ದಾರೆ. ಮನೆ-ಮನಗಳನ್ನು ಮುಟ್ಟುವವರು ಪತ್ರಿಕಾ ವಿತರಕರು. ಇದು ಕಠಿಣ ಕಾಯಕ. ಊರು ಮಲಗಿದಾಗ ಏಳುವವರು ಪತ್ರಿಕಾ ವಿತರಕರು. ಡಾ. ಅಬ್ದುಲ್ ಕಲಾಂ ಅವರು ಈ ಕೆಲಸವನ್ನು ಮಾಡಿ ರಾಷ್ಟ್ರಪತಿ ಹುದ್ದೆಗೇರಿದ್ದರು. ಜಗತ್ತಿನಲ್ಲಿ ಇಂಥ ಅವಕಾಶ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಪತ್ರಿಕಾ ವಿತರಕರು ಹಲವು ಸಮಸ್ಯೆಗಳ ನಡುವೆ ಆನಂದ ಅನುಭವಿಸುತ್ತಾರೆ. ಡಿಜಿಟಲ್ ಯುಗದಲ್ಲಿಯೂ ಪತ್ರಿಕೆ ಓದುವವರು ಬಹಳಷ್ಟಿದ್ದಾರೆ. ನಿತ್ಯ ಬೆಳಗ್ಗೆ 7 ಗಂಟೆಯೊಳಗೆ ಪತ್ರಿಕೆ ವಿತರಿಸಿದರೆ ಓದುಗರಿಗೆ ಲಾಭ ದೊರೆಯುತ್ತದೆ. ಕೋವಿಡ್ ಸಮಯದಲ್ಲಿ ಪತ್ರಿಕಾ ವಿತರಕರು ಮಾಡಿದ ಸೇವೆ ಶ್ಲಾಘನೀಯ. ಆದರೆ, ಪತ್ರಿಕೆಗಳ ಮಧ್ಯೆ ಭಿತ್ತಿ ಪತ್ರ ಇಡುವುದನ್ನು ಬಿಡಬೇಕು. ಯಾಕೆಂದರೆ ಪತ್ರಿಕೆಗಳ ಮಾಲೀಕರಿಗೆ ಬರುವ ಆದಾಯ ಕುಂದುತ್ತದೆ. ಇವರಿಗೆ ಆದಾಯ ಬರುವಂತೆ ಮಾಡಬೇಕು. ಅಂದಾಗ ನಿಮಗೆ ಹೆಚ್ಚಿನ ಕಮಿಷನ್ ಹಣ ಸಿಗಲಿದೆ ಎಂದ ಅವರು, ನಮ್ಮ ಮನೆಗೆ ಪತ್ರಿಕೆ ವಿತರಣೆ ಮಾಡುವವರಿಗೆ ಇಲೆಕ್ಟ್ರಿಕ್ ವೆಹಿಕಲ್ ಕೊಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಅಧ್ಯಕ್ಷ ಕೆ. ಶಂಭುಲಿಂಗ ಮಾತನಾಡಿ, ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಪತ್ರಿಕಾ ವಿತರಕರ ಸಮ್ಮೇಳನ ಆಯೋಜಿಸಲಾಗಿದೆ. ನಾವೆಲ್ಲರೂ ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಟ್ಟಾಗಬೇಕು. 200ಕ್ಕೂ ಹೆಚ್ಚು ಪತ್ರಿಕಾ ವಿತರಕರು ಕೋವಿಡ್ ವೇಳೆ ಮೃತಪಟ್ಟಿದ್ದಾರೆ. ಯಾವುದೇ ಸರ್ಕಾರಗಳು ಸಂತ್ರಸ್ತರ ಕುಟುಂಬದ ನೆರವಿಗೆ ಬಂದಿಲ್ಲ. ಆದರೆ, ನಮ್ಮ ಪತ್ರಿಕಾ ಸಂಸ್ಥೆಗಳು ಮುಂದೆ ಬಂದವು. ಜನಪ್ರತಿನಿಧಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ನಾವು ಎಷ್ಟೇ ಚೆನ್ನಾಗಿ ಮುದ್ರಣ ಮಾಡಿದರೂ ಬರೆದರೂ ಅದನ್ನು ಜನರಿಗೆ ಮುಟ್ಟಿಸುವ ಕೊಂಡಿಯಂತಿರುವವರು ಪತ್ರಿಕಾ ವಿತರಕರು. ಬಹಳಷ್ಟು ತಲೆಮಾರುಗಳಿಂದ ಈ ಕಾಯಕವನ್ನು ಗೌರವಯುತವಾಗಿ ಮಾಡಿಕೊಂಡು ಬಂದಿದ್ದಾರೆ. ಪತ್ರಿಕೋದ್ಯಮವನ್ನು ಬೆಳೆಸಿದವರು ಇವರೇ. ಪತ್ರಿಕಾ ವಿತರಕರ ಬದುಕಿನ ಗುಣಮಟ್ಟ ಹೆಚ್ಚಿಸಲು ಸರ್ಕಾರ ಗಮನ ಹರಿಸಬೇಕು. ನಿಮ್ಮೊಂದಿಗೆ ಮಾಧ್ಯಮ ಸಂಸ್ಥೆಗಳು ಇವೆ ಎಂದರು.
ಹುಬ್ಬಳ್ಳಿ ಪತ್ರಿಕಾ ಮಾರಾಟಗಾರರ ಸಂಘದ ಅಧ್ಯಕ್ಷ ಮನೋಹರ ಪರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಪದಾಧಿಕಾರಿಗಳಾದ ರಮೇಶ ಜಿತೂರಿ, ಸಿ.ಎಸ್. ಹಿರೇಮಠ, ಪತ್ರಕರ್ತರಾದ ವಿಠ್ಠಲದಾಸ್ ಕಾಮತ್, ಮಲ್ಲಿಕಾರ್ಜುನ ಸಿದ್ದಣ್ಣವರ, ಗಿರೀಶ ಪಟ್ಟಣಶೆಟ್ಟಿ, ಶಾನು ಯಲಿಗಾರ, ಬಂಡು ಕುಲಕರ್ಣಿ, ಮಂಜುನಾಥ ಕುಸಬಿ ಇತರರು ಇದ್ದರು.