ಜಿಲ್ಲೆ

ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರ ಸಹಕರಿಸಲಿ

ಬಸವರಾಜ ವೀರಪ್ಪ ಗರಗ

ಗಜೇಂದ್ರಗಡ: ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸಲು ರಾಜ್ಯ ಸರ್ಕಾರದ ಸಹಕಾರವೂ ಮುಖ್ಯವಾಗಿರುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಕಳಕಪ್ಪ ಬಂಡಿ ಅವರ ಗೃಹ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರೋಣ ಮತಕ್ಷೇತ್ರದ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗದಗ ನಗರದಲ್ಲಿ ಕಳೆದ 7 ವರ್ಷದ ಹಿಂದೆ ಕೇಂದ್ರೀಯ ವಿದ್ಯಾಲಯವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಆದರೆ, ಅಲ್ಲಿನ ರಾಜಕೀಯ ನಾಯಕರ ನಿರಾಸಕ್ತಿಯಿಂದ ಜಾಗದ ಸಮಸ್ಯೆಯಾಗಿ ವಿದ್ಯಾಲಯ ಸ್ಥಾಪನೆಯಾಗಲಿಲ್ಲ. ರಾಜ್ಯ ಸರ್ಕಾರಕ್ಕೆ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಒಂದು ಕೆಲಸವನ್ನಾಗಿ ಮಾಡಿಕೊಂಡಿದೆ. ತಮ್ಮ ವೈಫಲ್ಯ ಮುಚ್ಚಿಕೊಂಡು ಬರ ಪರಿಹಾರ, ಯಾವುದೇ ಟೆಂಡರಗಳನ್ನು ಕರೆಯದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರದ ಬಗ್ಗೆ ಅಪ್ರಪಚಾರ ಮಾಡುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಎಲ್ಲರನ್ನೂ ಒಳಗಡೆ ಹಾಕಿ ಸಂವಿಧಾನ ಬದಲು ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ 25 ಸಾವಿರ ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದರು.

ಸಂಸದರ ನಿಧಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಅನುದಾನವಿಲ್ಲ, ವಿಧೇಯಕ ತಿದ್ದುಪಡಿಯಾದರೆ ಶೈಕ್ಷಣಿಕ ಕ್ರಾಂತಿಯನ್ನೇ ಮಾಡುತ್ತೇನೆ. ಕೇಂದ್ರದ ಸರ್ಕಾರದ ಯೋಜನೆಗಳ ಹೊರತಾಗಿಯೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸವನ್ನು ನನ್ನ ಕ್ಷೇತ್ರದಲ್ಲಿ ಮಾಡಲು ನಾನು ಸದಾ ಸಿದ್ಧ. ಇಳಕಲ್ಲದಿಂದ ಕೈಗಾ ರಾಷ್ಟ್ರೀಯ ಹೆದ್ದಾರಿ ಆಗಬೇಕೆಂಬುದು ಇಲ್ಲಿನ ಜನರ ಹಲವಾರು ದಶಕಗಳ ಕನಸು, ಇದು ನನ್ನ ಲೋಕಸಭಾ ವ್ಯಾಪ್ತಿಯ ಹಲವಾರು ತಾಲೂಕುಗಳಿಗೆ ಉಪಯುಕ್ತವಾಗಿದೆ. ಈ ಕುರಿತು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ಮುಂದೆ ಪ್ರಸ್ತಾವನೆ ಇಟ್ಟಿದ್ದೇನೆ. ಈ ವಾರ ಶುಭ ಸುದ್ದಿ ಬರಲಿದೆ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಕ್ಷೇತ್ರದ ಜನರು ಸಂಸದರ ನಿಧಿಯಲ್ಲಿ ಗುಡಿ-ಗುಂಡಾರಗಳಿಗೆ ಅನುದಾನ ಕೇಳದೇ ಶೈಕ್ಷಣಿಕ ಕೆಲಸಗಳಿಗೆ ಕೇಳಬೇಕು. ಅಮದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ವಣವಾಗಲು ಸಾಧ್ಯವಾಗಲಿದೆ ಎಂದರು.

ನೂತನ ಸಂಸದರಿಗೆ ಇಳಕಲ್ಲಯಿಂದ ಕೈಗಾ ಮತ್ತು ಧಾರವಾಡದಿಂದ ಕಲಬುರಗಿವರೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಬೇಕು ಎಂದು ಮನವಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿ.ಎಂ. ಸಜ್ಜನರ, ನಿಂಗಪ್ಪ ಕೆಂಗಾರ, ಬಿ.ವಿ. ಕಂಬಳ್ಯಾಳ, ಎಸ್.ಎಸ್. ವಾಲಿ, ಅಮರೇಶ ಬಳಿಗೇರ, ಶಿವಾನಂದ ಮಠದ, ಇಂದಿರಾ ತೇಲಿ, ಉಮೇಶ ಮಲ್ಲಾಪುರ, ಎಂ.ಎಸ್. ಕರಿಗೌಡ್ರ, ಅಶೋಕ ವನ್ನಾಲ, ಉಮೇಶ ಪಾಟೀಲ, ವಿಶ್ವಾನಾಥ ಕುಷ್ಟಗಿ, ಬಸವರಾಜ ಬಂಕದ, ವೀರಪ್ಪ ಪಟ್ಟಣಶೆಟ್ಟಿ, ರೂಪಲೆಶ ರಾಠೋಡ, ಸುಭಾಸ ಮ್ಯಾಗೇರಿ, ಶರಣಪ್ಪ ಉಪ್ಪಿನಬೆಟಗೇರಿ, ಶಿವಾನಂದ ಅರಳಿ, ಇತರರಿದ್ದರು.