ಕಲ್ಲಾಪುರ ಹಾಗೂ ಅಂಬಾರಗೊಪ್ಪ ಕ್ರಾಸ್‌ನಲ್ಲಿರುವ ಟೋಲ್ ಗೇಟ್ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬಿ.ವೈ.ರಾಘವೇಂದ್ರ ಶುಕ್ರವಾರ ಸಭೆ ನಡೆಸಿದರು. ಕೆ.ಎಸ್.ಗುರುಮೂರ್ತಿ, ಗುರುದತ್ತ ಹೆಗಡೆ, ಸಿದ್ದಲಿಂಗಪ್ಪ ನಿಂಬೆಗೊಂದಿ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.  
ಜಿಲ್ಲೆ

ರಾಜ್ಯ ಸರ್ಕಾರ ನಿರ್ಧಾರ ಬದಲಿಸಲಿ: ಬಿವೈಆರ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಐದಾರು ವರ್ಷಗಳ ಹಿಂದೆಯೇ ಕೆ-ಶಿಪ್ ಮೂಲಕ ಶಿವಮೊಗ್ಗ-ಶಿಕಾರಿಪುರ-ಆನವಟ್ಟಿ-ಹಾನಗಲ್ ತಡಸ ಮಾರ್ಗವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿರುವವರೆಗೂ, ನಮ್ಮ ಸರ್ಕಾರ ಇರುವವರೆಗೂ ಆ ಮಾರ್ಗಕ್ಕೆ ಟೋಲ್‌ಗೇಟ್ ಅಳವಡಿಸಲು ಅವಕಾಶ ನೀಡಿರಲಿಲ್ಲ. ಸರ್ಕಾರ ಈಗಲಾದರೂ ತನ್ನ ನಿರ್ಧಾರ ಬದಲಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಟೋಲ್ ಗೇಟ್ ತೆರವು ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅದೂ ಒಂದೇ ಜಿಲ್ಲೆಯಲ್ಲಿ ಎರಡು ಟೋಲ್ ಅಳವಡಿಸಲಾಗಿದೆ. ಮೂರು ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಒಂದೇ ಜಿಲ್ಲೆಯಲ್ಲಿ ಎರಡು ಟೋಲ್ ಹಾಕಿರುವುದು ಆಶ್ಚರ್ಯ ಮೂಡಿಸಿದೆ ಎಂದು ಹೇಳಿದರು.
ಶಿವಮೊಗ್ಗ ತಾಲೂಕಿನ ಕಲ್ಲಾಪುರ, ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಟೋಲ್ ಗೇಟ್ ಹಾಕಲಾಗಿದೆ. ಟೋಲ್ ಗೇಟ್‌ಗಳ ನಡುವೆ 60 ಕಿ.ಮೀ ಅಂತರವಿರಬೇಕು ಎಂಬ ಮಾರ್ಗಸೂಚಿ ಅನುಸರಿಸಿಲ್ಲ. ಇದು ಜನರಿಗೆ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆ, ಸರ್ಕಾರಿ ಕಚೇರಿ, ದುಡಿಮೆಗೆಂದು ತೆರಳುವ ಜನರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಇದರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಮನವಿ ಸಲ್ಲಿಸಲಾಗಿದೆ. ಈಗಲೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಒಂದೇ ಜಿಲ್ಲೆಯ ಮೇಲೆ ಈ ರೀತಿಯ ಹೊರೆ ಹಾಕುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಡಿಸಿ ಗುರುದತ್ತ ಹೆಗಡೆ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ಕೆ-ಶಿಫ್ ಅಧಿಕಾರಿಗಳು ಇದ್ದರು.