ಜಿಲ್ಲೆ

ಕಬಡ್ಡಿ ಪ್ರಚುರಪಡಿಸುವ ಮನೋಧೈರ್ಯ ಮೂಡಲಿ

ನರಗುಂದ: ರಾಷ್ಟ್ರೀಯತೆ, ಭಾಷೆ ಮತ್ತು ಎಲ್ಲ ಜನಾಂಗದವರನ್ನು ಒಂದೆಡೆ ಸಂಗಮಗೊಳಿಸುವ ಶಕ್ತಿ ದೇಶಿ ಕ್ರೀಡೆ ಕಬಡ್ಡಿಗಿದೆ. ಹೀಗಾಗಿ ಕಬಡ್ಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ಪಡೆದಿದೆ ಎಂದು ಕ್ರೀಡಾಪ್ರೇಮಿ ಚನ್ನಯ್ಯ ಸಂಗಳಮಠ ಹೇಳಿದರು.

ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠದ ಜಾತ್ರಾ ಮಹೋತ್ಸವ ಅಂಗವಾಗಿ ಭಗತ್ ಸಿಂಗ್ ಸ್ಪೋರ್ಟ್ಸ್ ಕ್ಲಬ್, ಆಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಶ್ರೀ ಮಠದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಿ ಪದ್ದತಿಯ ಈ ಆಟವನ್ನು ಅಳಿಸದೇ ಉಳಿಸಿ ಎಲ್ಲ ಕಡೆಗಳಲ್ಲಿಯೂ ಪ್ರಚುರಪಡಿಸುವ ಮನೋಧೈರ್ಯ ಎಲ್ಲರಲ್ಲೂ ಅತ್ಯಗತ್ಯವಾಗಿ ಮೂಡಿಬರಬೇಕು ಎಂದರು.

ಸಾನ್ನಿಧ್ಯವಹಿಸಿದ್ದ ಪತ್ರಿವನಮಠದ ಡಾ.ಗುರುಸಿದ್ಧಶಿವಯೋಗಿ ಶಿವಾಚಾರ್ಯರು ಮಾತನಾಡಿ, ಯಾವುದೇ ಪಂದ್ಯಾವಳಿಯಾಗಿರಲಿ ಅಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪ್ರೀತಿಯಿಂದ ಇಂತಹ ಪಂದ್ಯಾವಳಿಗಳಲ್ಲಿ ಆಡುವ ಮೂಲಕ ಎಲ್ಲರ ಮನಸು ಗೆಲ್ಲಲು ಶ್ರಮಿಸಬೇಕು ಎಂದರು. ನರೇಗಲ್ಲದ ರೇಣುಕಾದೇವಿ ಕಬಡ್ಡಿ ತಂಡ, ಡಿವೈಎಸ್​ಎಸ್ ದಾವಣಗೇರಿ, ಭಗತ್​ಸಿಂಗ್ ಮುಂಡರಗಿ, ಕೊಣ್ಣೂರ ಪರ್ವತಗೌಡ ಕಬಡ್ಡಿ ತಂಡ ಹಾಗೂ ಬಳ್ಳಾರಿ, ಬೆಳಗಾವಿ, ನರಗುಂದ, ಹೆಬ್ಬಳ್ಳಿ, ಕಲಕೇರಿ, ನಂದಿಕೇಶ್ವರ ಸವದತ್ತಿ, ಶಿರೋಳ, ಯಮನೂರ, ಹುಬ್ಬಳ್ಳಿ ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿವೆ.

ನಿರ್ಣಾಯಕರಾಗಿ ಬೆಂಗಳೂರು ಆಮೆಚೂರ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಸಹದೇವ ಗಣಾಚಾರಿ, ಜಿಲ್ಲಾ ಆಮೆಚೂರ್ ಕಬಡ್ಡಿ ಅಸೋಸಿಯೇಷನ್​ದ ಫಕೀರಗೌಡ ಪಾಟೀಲ, ರಮೇಶ ಪಾಟೀಲ ನೇತೃತ್ವ ವಹಿಸಿದ್ದರು. ಉದ್ಘಾಟನೆ ಪಂದ್ಯದಲ್ಲಿ ಎಫ್.ಬಿ. ಧರೆಯಣ್ಣವರ, ದೈಹಿಕ ಪರಿವೀಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ಎಂ.ಎಂ. ಕಲಹಾಳ, ವಿ.ಎನ್. ಕೊಳ್ಳಿಯವರ, ಪ್ರಕಾಶ ಪಟ್ಟಣಶೆಟ್ಟಿ, ಅನಿಲ ಜಮಖಂಡಿ, ಬಿ.ಎನ್. ಚವಡಿ, ಪ್ರವೀಣ ಕಗದಾಳ, ಸಿಕಂದರ ಪಠಾಣ, ಬಿ.ಎಂ. ಬೀರನೂರ, ಇತರರು ಉಪಸ್ಥಿತರಿದ್ದರು. ವಾಸನ, ಕೊಣ್ಣೂರ ಮುಂತಾದ ಕಡೆಗಳಿಂದ ಆಗಮಿಸಿದ್ದ ಕಬಡ್ಡಿ ಮಾಜಿ ಕ್ರೀಡಾಪಟುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಎಫ್.ಬಿ. ಧರೆಯಣ್ಣವರ ಕಾರ್ಯಕ್ರಮ ನಿರ್ವಹಿಸಿದರು.