ಎಚ್.ಡಿ.ಕೋಟೆ: ಕವಿ, ಸಾಹಿತಿಗಳ ಮಾತು ಸಮಾಜಕ್ಕೆ ಬೆಳಕಾಗಬೇಕೆ ಹೊರತು ಬೆಂಕಿಯಾಗಬಾರದು. ಅವರು ಸಾಮಾಜಿಕ ಹೊಣೆಗಾರಿಕೆಯಿಂದ ಬರೆಯಬೇಕು, ಮಾತನಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ತುಂಬಸೋಗೆ ಗ್ರಾಮದ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಂಎಂಕೆ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ ಗ್ರಾಮೀಣ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಚ್.ಡಿ.ಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಳೆದ 6-7 ವರ್ಷಗಳಿಂದ ತಾಲೂಕು ಮಟ್ಟದಲ್ಲಿ ಕವಿಗೋಷ್ಠಿ ಕಾರ್ಯಕ್ರಮವನ್ನು ಮಾಡುತ್ತಿದೆ. 300 ಸಾಲಿನಲ್ಲಿ ಹೇಳುವ ಗದ್ಯವನ್ನು ಮೂರೇ ಸಾಲಿನಲ್ಲಿ ಹೇಳುವುದು ಕವಿತೆ. ಕವಿತೆಗಳಿಗೆ ತನ್ನದೆ ಆದ ತೂಕವಿದೆ, ಗೌರವವಿದೆ ಎಂದು ವಿಶ್ಲೇಷಿಸಿದರು.
ಸಾಮಾಜಿಕ ಆತಂಕಗಳು, ಸಂಘರ್ಷಗಳು, ಸಮಸ್ಯೆಗಳ ನಡುವೆ ಕವಿತೆಗಳು ಸಮಾಜಕ್ಕೆ ಬೆಳಕು ಚೆಲ್ಲುವಂತಿರಬೇಕು. ಕವಿ ಅಥವಾ ಸಾಹಿತಿಯಾದವರು ಹಿಂದಿನ ಕವಿಪುಂಗವರ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಕವಿ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಕವಿ ಸಮಾಜವನ್ನು ತಿದ್ದುವ ಸಮಾಜಕ್ಕೆ ಬೆಳಕಾಗುವ ವ್ಯಕ್ತಿಯಾಗಬೇಕೆ ಹೊರತು ಸಮಾಜವನ್ನು ಕೆರಳಿಸುವ, ಒಡೆಯುವ ವ್ಯಕ್ತಿಯಾಗಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಎಸ್.ಪುಟ್ಟಪ್ಪ ಮುಡಿಗುಂಡ ಒಬ್ಬ ಶ್ರೇಷ್ಟ ಕವಿಯಾಗಲು ನೂರಾರೂ ಕವಿತೆಗಳನ್ನು ಓದಿ ಅಧ್ಯಯನ ಮಾಡಬೇಕು. ಹಿಂದಿನ ಕವಿಪುಂಗವರು ಹೇಳಿದ್ದನ್ನು ಓದಬೇಕು. ಯುಗ ಯುಗಾಂತರದ ವಿಚಾರಗಳನ್ನು ಮುಂದಿನ ಪೀಳಿಗೆಗಳಿಗೆ ತಿಳಿಸುವುದರಲ್ಲಿ ಕವಿತೆಗಳ ಮಹತ್ವ ದೊಡ್ಡದು ಎಂದರು.
ಇದೇ ವೇಳೆ ಡಾ.ಕಿರಣ್ ಸಿಡ್ಲೇಹಳ್ಳಿ, ಉಪನ್ಯಾಸಕ ಕಾಳೇಗೌಡ, ಕೆ.ರಮೇಶ್, ಎಂ.ಕುಮಾರಿ, ಬಾಲಸುಬ್ರಹ್ಮಣ್ಯ, ಭಾಸ್ಕರ್ ಕಿತ್ತೂರು, ಶಿವಕುಮಾರ್, ಎಸ್.ಎಸ್.ಮಹದೇವಯ್ಯ, ಹೇಮಪ್ರಿಯಾ, ವೈಷ್ಣವಿ, ಸಂಜಯ್ ಅವರು ಕವಿಗೋಷ್ಠಿಯಲ್ಲಿ ಕನ್ನಡ ನಾಡು, ನುಡಿ, ಮೈಸೂರು ದಸರಾ, ಡಾ.ಶಿವಕುಮಾರ ಸ್ವಾಮೀಜಿ ಸೇರಿದಂತೆ ನಾನಾ ವಿಷಯದ ಕುರಿತು ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ, ಎಂ.ಎಂ.ಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಪಿ.ಪ್ರಕಾಶ್, ಎಚ್.ಡಿ. ಕೋಟೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಸ್.ಮಹದೇವು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಮೈಸೂರು ಜಿಲ್ಲಾ ಕಸಾಪದ ಜಂಟಿ ಕಾರ್ಯದರ್ಶಿ ಕೆ.ಕೆಂಪಣ್ಣ, ಗೌರವ ಕಾರ್ಯದರ್ಶಿ ಗಿರೀಶ್ ಮೂರ್ತಿ, ಮಹದೇವಮ್ಮ ಇತರರಿದ್ದರು.