ಜಿಲ್ಲೆ

ಪಾರಂಪರಿಕ ವೈದ್ಯರಿಂದ ಸಮಾಜ ಮೆಚ್ಚುವ ಕೆಲಸವಾಗಲಿ

ನಾಗಮಂಗಲ: ಪಾರಂಪರಿಕ ವೈದ್ಯರು ತಮ್ಮ ವೈದ್ಯಕೀಯ ಪದ್ಧತಿಯನ್ನು ತಾವೇ ಮೆಚ್ಚಿಕೊಂಡು ಪ್ರಶಂಸಿಸಿಕೊಳ್ಳದೆ ನಿಮ್ಮ ಸೇವೆಯನ್ನು ಸಮಾಜ ಮೆಚ್ಚಿ ಹೊಗಳುವಂತಾದಾಗ ಮಾತ್ರ ಪಾರಂಪರಿಕ ವೈದ್ಯ ಪದ್ಧತಿ ಯಶಸ್ವಿಯಾಗಿ ಉಳಿಯಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.


ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಮತ್ತು ಆದಿಚುಂಚನಗಿರಿ ಮಠದ ಸಹಯೋಗದಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.


ವೈದ್ಯ ವೃತ್ತಿಯಲ್ಲಿ ಪಡೆದ ನಿಮ್ಮ ಅನುಭವವನ್ನು ಸಮಾವೇಶದಲ್ಲಿ ಪಾರಂಪರಿಕ ವೈದ್ಯರು ಹಂಚಿಕೊಂಡಿರುವುದು ಪಾರಂಪರಿಕ ವೈದ್ಯಕೀಯ ಪದ್ಧತಿ ಜೀವಂತಿಕೆಗೆ ಸಹಕಾರಿಯಾಗಲಿದೆ. ತಮ್ಮಲ್ಲಿರುವ ವಿದ್ಯೆಯನ್ನು ನೂರಾರು ಜನರಿಗೆ ಹಂಚಿದಾಗ ಮಾತ್ರವೇ ಅದು ಮುಂದಿನ ಪೀಳಿಗೆಗೂ ಶಾಶ್ವತವಾಗಿ ಉಳಿಯಲು ಸಾಧ್ಯ. ತಮ್ಮಲ್ಲಿನ ವಿದ್ಯೆಯನ್ನು ನಿಸ್ವಾರ್ಥವಾಗಿ ಶಿಷ್ಯರಿಗೆ ಹಂಚುವ ಕಾಯಕವೇ ನಿಜವಾದ ಭಾರತೀಯ ಸಂಸ್ಕೃತಿಯಾಗಿದೆ ಎಂದರು.
ಪಾರಂಪರಿಕ ವೈದ್ಯ ಪರಿಷತ್ ಸಂಸ್ಥಾಪಕ ಗಾ.ನಂ.ಶ್ರೀಕಂಠಯ್ಯ ಮಾತನಾಡಿ, ಆದಿಚುಂಚನಗಿರಿ ಮಠದ ಶ್ರೀಗಳ ಆಶೀರ್ವಾದದಿಂದ ಸಮಾವೇಶ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಪಾರಂಪರಿಕ ವೈದ್ಯ ಪದ್ಧತಿಯು ಸರ್ಕಾರ ಮತ್ತು ಜನರ ದೃಷ್ಟಿಯಿಂದ ಯಶಸ್ವಿಯಾಗಬೇಕಿದೆ. ಪಾರಂಪರಿಕ ವೈದ್ಯರು ವೃತ್ತಿ ಮಾಡಲು ಅವಕಾಶ ದೊರೆಯುವಂತಾಗಬೇಕು ಎಂದರು.


ಸರ್ಕಾರದ ಮಾನ್ಯತೆ ದೊರೆಯುವಂತೆ ಮಾಡುವ ಕೆಲಸಗಳು ನಮ್ಮ ಪಾರಂಪರಿಕ ವೈದ್ಯರಿಂದಾಗಬೇಕಿದೆ. ಪಾರಂಪರಿಕ ವೈದ್ಯ ಪರಿಷತ್ ವಿಶಿಷ್ಟವಾದ ವೈದ್ಯರನ್ನು ಗುರುತಿಸಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ವೈದ್ಯರನ್ನು ಪರಿಚಯಿಸುವ ಜತೆಗೆ ವೈದ್ಯ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕಿದೆ. ಆದಿಚುಂಚನಗಿರಿ ಬೆಟ್ಟದಲ್ಲಿ ನೂರಾರು ಔಷಧ ಸಸ್ಯಗಳಿದ್ದು, ಇಲ್ಲೊಂದು ಔಷಧ ವನವನ್ನಾಗಿ ಮಾಡಲು ಅವಕಾಶವಿದೆ ಎಂದರು.

ಔಷಧ ಸಸ್ಯಗಳ ಗುರುತು: ಶನಿವಾರ ಬೆಳಗ್ಗೆ ಆದಿಚುಂಚನಗಿರಿ ಬೆಟ್ಟಕ್ಕೆ ಭೇಟಿ ನೀಡಿದ ನೂರಾರು ಪಾರಂಪರಿಕ ವೈದ್ಯರು ಹಲವು ವಿಶೇಷ ಔಷಧ ಸಸ್ಯಗಳನ್ನು ಪತ್ತೆಹಚ್ಚಿದರು. ಬೆಟ್ಟದಲ್ಲಿ ಸಂಗ್ರಹಿಸಿದ ವಿಶೇಷ ಔಷಧ ಸಸ್ಯಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಸಮ್ಮೇಳನದಲ್ಲಿ ಭಾಗಿಯಾಗಿದ್ದ ಪಾರಂಪರಿಕ ವೈದ್ಯರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ದಾವಣಗೆರೆ ವಿರಕ್ತಮಠದ ಮಹಾಂತ ರುದ್ರಪ್ರಭು ಸ್ವಾಮೀಜಿ, ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಜಿ.ಮಹದೇವಯ್ಯ, ಉಪಾಧ್ಯಕ್ಷ ಬಸವರಾಜ್ ಅಂಬಿಗೆರೆ, ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಚಿತ್ರದುರ್ಗದ ಬಸವನಾಗಿದೇವ ಸ್ವಾಮೀಜಿ, ಶಿರಡಿ ಸಾಯಿಬಾಬಾ ಅಭಿವೃದ್ಧಿ ಸಂಘದ ಧರ್ಮದರ್ಶಿ ಮುನಿಯಪ್ಪ, ವೈದ್ಯರಾದ ಮಂಜುನಾಥ್, ಗೋಪಾಲಕೃಷ್ಣ, ರಾಮಚಂದ್ರಪ್ಪ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಪಾರಂಪರಿಕ ವೈದ್ಯರು ಭಾಗವಹಿಸಿದ್ದರು.