ಆಲೂರು ಅಂಬೇಡ್ಕರ್ ಭವನದಲ್ಲಿ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ  
ಜಿಲ್ಲೆ

ಸಾಮಾಜಿಕ ಭದ್ರತಾ ಯೋಜನೆ ಅರ್ಹರನ್ನು ತಲುಪಲಿ

ಅಭಿನಯ್ ಎಚ್.ಎಂ

ಆಲೂರು: ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಆರ್ಥಿಕ ವ್ಯವಸ್ಥೆಯಡಿ ತರುವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ತಲುಪಿಸುವುದೇ ‘ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ’ದ ಮುಖ್ಯ ಉದ್ದೇಶ ಎಂದು ಬೆಂಗಳೂರು ಆರ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ ಅಭಿಪ್ರಾಯಪಟ್ಟರು.

ಕಣತೂರು ಹಾಗೂ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘3 ತಿಂಗಳ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಭಿಯಾನವನ್ನು ಕೇಂದ್ರ ಸರ್ಕಾರ ಜು.1 ರಿಂದ ಅ.30ರವರೆಗೆ 3 ತಿಂಗಳು ರಾಷ್ಟ್ರವ್ಯಾಪಿ ನಡೆಸಲಾಗುತ್ತಿದೆ. ಪ್ರಧಾನ ಮಂತ್ರಿ ಜನ ಧನ್ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳಂತಹ ಹಣಕಾಸು ಸೇವೆಗಳನ್ನು ಎಲ್ಲ ಅರ್ಹ ವ್ಯಕ್ತಿಗಳಿಗೆ ತಲುಪಿಸುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಸಂಪೂರ್ಣಗೊಳಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಅಭಿಯಾನದ ಅಂಗವಾಗಿ ದೇಶದಾದ್ಯಂತ ಶಿಬಿರಗಳನ್ನು ಆಯೋಜಿಸಿ, ಹಣ ಉಳಿತಾಯ, ಡಿಜಿಟಲ್ ಸಾಕ್ಷರತೆ ಮತ್ತು ಆನ್‌ಲೈನ್ ವಂಚನೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಎಂದರು.

ಬೆಂಗಳೂರು ಆರ್‌ಬಿಐ ಬ್ಯಾಂಕ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶೈಲೇಂದ್ರನಾಥ ಮಾತನಾಡಿ, ಪ್ರಧಾನ ಮಂತ್ರಿ ಜನಧನ್, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ , ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳ ಪ್ರಯೋಜನಗಳನ್ನು ಅರ್ಹರು ಪಡೆದುಕೊಳ್ಳಬೇಕು ಎಂದರು.

ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸರಸ್ವತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಸೋನಾಲಿಸೇನ್ ಗುಪ್ತಾ, ಜನರಲ್ ಮ್ಯಾನೇಜರ್ ಮೀನಾಕ್ಷಿ ಗಂಜು, ಎಜಿಎಂಎಫ್‌ಐಡಿಡಿ ಬುಬುಲ್ ಬಿ.ಲೊಯಿ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಶೈಲೇಂದ್ರನಾಥ ಸೇಠ್, ಎಸ್‌ಬಿಐ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಕೃಷ್ಣ ಮೋಹನ್ ಮುಚ್ಚರ್ಲ, ಪ್ರಾದೇಶಿಕ ವ್ಯವಸ್ಥಾಪಕ ಕನಯ್ಯ ಲಾಲ್ ಗೋಪಾಲಿ, ಡಿವಿಜಿನಲ್ ಮ್ಯಾನೇಜರ್ ಜಂಬುಲ್ಕರ್, ಬ್ಯಾಂಕ್ ಆಫ್ ಬರೋಡ ಹಾಸನ ಶಾಖೆಯ ಮ್ಯಾನೇಜರ್ ಸುರೇಶ್ ಶೆಟ್ಟಿ, ಮೈಸೂರು ಕರ್ನಾಟಕ ಬ್ಯಾಂಕ್ ಸಹಾಯಕ ಜನರಲ್ ಮ್ಯಾನೇಜರ್ ಡಾ ಅರುಣ್ ಕುಮಾರ್, ಸಂದೀಪ್ ಸಿಂಗ್, ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸರಸ್ವತಿ ಇತರರಿದ್ದರು.