ಶಿರಸಿ: ಸರ್ಕಾರದ ಕಡೆಯಿಂದ ಸಂಸ್ಕೃತ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ಸಿಗಬೇಕು. ಈಗಿರುವ ಅಡಚಣೆ ದೂರವಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸೃ್ಕ ಅಧ್ಯಾಪಕರ ಸಂಘದ ಶಿರಸಿ ಶಿಕ್ಷಣಿಕ ಜಿಲ್ಲಾ ಘಟಕ ಶನಿವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರೌಢ ಶಾಲಾ ಹಂತದಲ್ಲಿ ಸಂಸ್ಕೃತ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ಸಂಸ್ಕೃತ ಓದುವವರಿಗೆ ಉತ್ತೇಜನ ನೀಡಲು ಇಂಥ ಕಾರ್ಯಕ್ರಮ ಪ್ರಶಸ್ತವಾಗಿವೆ ಎಂದರು.
ಸಂಸ್ಕೃತ ಸಾಹಿತ್ಯ ಅರಿತರೆ ಉದ್ಯೋಗ ನಿರೀಕ್ಷೆ ಕಡಿಮೆ ಇದ್ದರೂ ಬದುಕಿಗೆ ಬರುತ್ತದೆ ಎಂದ ಅವರು, ಸಂಸ್ಕೃತದೊಳಗಿನ ವಿಷಯ ಓದಿ ತಿಳಿದು ಸಮಾಜಕ್ಕೆ ಹೇಳುವ ಕಾರ್ಯ ಆಗಬೇಕು. ಸಂಸ್ಕೃತದಲ್ಲಿ ಪ್ರಾಚೀನ ಭಾರತೀಯ ಜೀವನ ದೃಷ್ಟಿಕೋನ ಸಿಗಲಿದೆ ಎಂದರು.
ಅನೇಕ ಸತ್ವಗಳಿಂದ ಕೂಡಿದ ಸಂಸ್ಕೃತವು ಒಳಗಿನ ಸತ್ವದಿಂದಲೇ ಉಳಿದಿದೆ. ಸಂಸ್ಕೃತ ಪಠ್ಯಕ್ಕೆ ಒಂದು ಮಿತಿ ಇದೆ. ಅಂಕದ ಮಿತಿಯೂ ಇದೆ. ಪಠ್ಯಕ್ರಮದಲ್ಲಿ ಹೊರತಾಗಿಯೂ ಓದಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಶಿಕ್ಷಣ ಸಂಯೋಜಕ ಪ್ರಸನ್ನ ಹೆಗಡೆ, ವಿ. ರಾಮಚಂದ್ರ ಭಟ್ ಉಮ್ಮಚಗಿ, ಸಂಸ್ಕೃತ ವಿಷಯ ಪರಿವೀಕ್ಷಕ ವೆಂಕಟರಮಣ ಭಟ್ಟ, ರಾಜ್ಯ ಸಂಘದ ಅಧ್ಯಕ್ಷ ವಿ. ಕೃಷ್ಣ ಭಟ್ಟ ಭಾಗವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಗಿರೀಶ ಹೆಗಡೆ, ರಾಜಾರಾಮ ದೀಕ್ಷಿತ, ಕೆ.ಎಸ್. ವಿಘ್ನೕಶ್ವರ, ಗಣಪತಿ ಜೋಶಿ, ರಮಾಕಾಂತ ಭಟ್ಟ, ವಿನಾಯಕ ಹೆಗಡೆ, ಕೃಷ್ಣಮೂರ್ತಿ ಭಟ್ಟ ಇತರ ಪದಾಧಿಕಾರಿಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು.
ನೀರನ್ನು ಶೋಧಿಸಿ ಕುಡಿಯಬೇಕು. ಆಡುವ ಮಾತುಗಳು ಶಾಸ್ತ್ರ ಸಮ್ಮತವಾಗಿರಬೇಕು. ಮನಸಿಗೆ ತೃಪ್ತಿಯಾಗುವ ರೀತಿಯಲ್ಲಿ ಕಾರ್ಯಗಳನ್ನು ಮಾಡಬೇಕು. ಆಗ ಒಳಗಿನ ಅಂತಃ ಸಾಕ್ಷಿ ಸಂತೋಷವಾಗಿರುತ್ತದೆ. | ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ