ಸವಣೂರ: ಚಂದ್ರಯಾನ-3 ಯಶಸ್ವಿಗೊಳಿಸಿದ ವಿಜ್ಞಾನಿಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆಗೆ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ, ಕ್ರೀಡೆ ಮತ್ತು ಕಾಲೇಜ್ ಸಂಸತ್ ಉದ್ಘಾಟನೆ, ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ, ಇಂದು ಉನ್ನತ ಮಟ್ಟದಲ್ಲಿ ಬೆಳೆದಿರುವುದು ಸಂತಸ ತಂದಿದೆ. ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಲಂಡನ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗ ಪಡೆದಿರುವದು ಸವಣೂರಿಗೆ ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಲಾಭ-ಹಾನಿ ನೋಡದೇ ಸಂಸ್ಥೆಯನ್ನು ಮುನ್ನಡೆಸಲು ಸೂಚಿಸಿದ್ದೆ. ಸಂಸ್ಥೆಯ ಆಡಳಿತ ಮಂಡಳಿ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ವಿ.ಎಸ್. ಸಿಂಧೂರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಡಿ.ಎನ್. ಗುಂಜಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಆರ್ಸಿ ಎಂ.ಎನ್. ಅಡಿವೆಪ್ಪನವರ, ಪದಾಧಿಕಾರಿಗಳಾದ ಎನ್.ಎಸ್. ಹಾವಣಗಿ, ಎ.ಎ. ಜಹಾಂಗೀರ್, ಎಸ್.ಎಂ. ಗಡೆಪ್ಪನವರ, ಪಿ.ಎಸ್. ಕಲ್ಮಠ, ಎಂ.ಟಿ. ರಾಯ್ಕರ್, ಸಿ.ಸಿ. ಅಂಗಡಿ, ಮುಖ್ಯಗುರುಗಳಾದ ಪ್ರಭು ಅರಗೋಳ, ಬಿ.ಬಿ. ದ್ಯಾಮನಗೌಡ್ರ, ಐ.ಎಸ್. ಬರದೂರ, ಎ.ಎಂ. ಕಲಕೋಟಿ ಹಾಗೂ ಇತರರು ಪಾಲ್ಗೊಂಡಿದ್ದರು. ಪ್ರಾಚಾರ್ಯ ಆನಂದ ಬೆಲ್ಲದ ಕಾರ್ಯಕ್ರಮ ನಿರ್ವಹಿಸಿದರು.