ನರಗುಂದ: ಸಾರ್ವಜನಿಕ ಸೇವಾ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಸಾಧನಗಳನ್ನು ಆರ್‌ಟಿಒ ಅಧಿಕಾರಿಗಳು ಅಳವಡಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಈ ಆದೇಶವನ್ನು ಸರ್ಕಾರ ತಕ್ಷಣವೇ ಹಿಂಪಡೆಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ತಾಲೂಕು ಲಾರಿ, ಟ್ಯಾಕ್ಸಿ ಚಾಲಕ ಹಾಗೂ ಮಾಲೀಕರ ಸಂಘದ ಕಾರ್ಯದರ್ಶಿ ಎಚ್.ಎಂ. ಪಾಣಿಗಟ್ಟಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಲಾರಿ ಮಾಲೀಕರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಲ್ಲ ವಾಣಿಜ್ಯ ವಾಹನಗಳಿಗೆ 2024ರ ಸೆ. 10ರೊಳಗಾಗಿ ಜಿಪಿಎಸ್ ಪ್ಯಾನಿಕ್ ಬಟನ್ ಅಳವಡಿಸುವಂತೆ ಕೇಂದ್ರ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಈ ಬಗ್ಗೆ ಆರ್‌ಟಿಒ, ಪೊಲೀಸ್ ಇಲಾಖೆಗೆ ಸ್ಪಷ್ಟ ಮಾಹಿತಿ ಇಲ್ಲ. ಹೀಗಿದ್ದರೂ ಪ್ರತಿವರ್ಷ ಲಾರಿ ಚಾಲಕ, ಮಾಲೀಕರು ತಮ್ಮ ವಾಹನಗಳ ನೋಂದಣಿ ನವೀಕರಣಕ್ಕೆ ತೆರಳಿದರೆ ಅವುಗಳಿಗೆ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಆ್ಯಂಡ್ ಎಮರ್ಜೆನ್ಸಿ ಬಟನ್ ಅಳವಡಿಸಿಕೊಳ್ಳುವಂತೆ ಸೂಚಿಸಿ, ನವೀಕರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಲಾರಿ, ಟ್ಯಾಕ್ಸಿ ಮುಂತಾದ ಗೂಡ್ಸ್ ವಾಹನಗಳಿಗೆ ಸಾಧನ ಅಳವಡಿಸಲು 12 ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ರಾಷ್ಟ್ರೀಯ ರಹದಾರಿ (ನ್ಯಾಷನಲ್ ಪರ್ಮಿಟ್) ಹೊಂದಿರುವ ಸರಕು ಸಾಗಣೆ ವಾಹನಕ್ಕೆ 7899 ರೂಪಾಯಿ ಪಾವತಿಸಿ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಆದರೆ, 7899 ರೂ. ಬದಲು 13,500 ರಿಂದ 16 ಸಾವಿರ ರೂ. ಪಡೆದು ಸಾಧನ ಅಳವಡಿಸುತ್ತಿವೆ ಎಂದು ದೂರಿದರು.
ಪ್ರತಿವರ್ಷ ಗದಗ ಆರ್‌ಟಿಒ ಕಚೇರಿಯಲ್ಲಿ ವಾಹನಗಳ ಪಾಸಿಂಗ್‌ಗೆ ಸರ್ಕಾರದಿಂದ 600 ರೂ. ನಿಗದಿಪಡಿಸಿದ್ದರೂ ಅಧಿಕಾರಿಗಳು ಏಜೆಂಟರಿಂದ 5,500 ರೂಪಾಯಿ ಪಡೆಯುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಯಾವುದೇ ಕಾರಣಕ್ಕೂ ಶೈಕ್ಷಣಿಕ ಪ್ರವಾಸ, ಖಾಸಗಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಾರದೆಂಬ ಆದೇಶವಿದ್ದರೂ ಬಹುತೇಕರು ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಯಾವುದೇ ವಾಹನಗಳಿಗೆ ಓವರ್‌ಲೋಡ್ ಹಾಕಿದರೆ ವಾಹನ ಮತ್ತು ಅದರ ಮಾಲೀಕ, ಉತ್ಪನ್ನಗಳನ್ನು ಹೇರಿದ ಮಾಲೀಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳುವಂತೆ ನಿರ್ದೇಶನವಿದೆ. ಆದರೆ, ಆರ್‌ಟಿಒ ಇಲಾಖೆ ಅಧಿಕಾರಿಗಳು ಮಾತ್ರ ಖಡಿ, ಉಸುಕು, ಅಕ್ರಮ ಮಣ್ಣು ಸಾಗಿಸುವ ಟಿಪ್ಪರ್‌ಗಳ ಮೇಲೆ ಕೇಸ್ ದಾಖಲಿಸಿಕೊಳ್ಳುತ್ತಿಲ್ಲ. ಸರ್ಕಾರದ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಬಾರದೆಂಬ ನಿಯಮವಿದೆ. ಇದನ್ನು ಎಲ್ಲಿಯೂ ಪಾಲಿಸುತ್ತಿಲ್ಲ. ಈ ಬಗ್ಗೆ ಬೆಳಗಾವಿ ಉಪಸಾರಿಗೆ ಆಯುಕ್ತೆ ಎಂ.ಪಿ. ಓಂಕಾರೇಶ್ವರಿ, ಗೃಹಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಂಕ್ರಣ್ಣ ವಾಳದ, ಉಪಾಧ್ಯಕ್ಷ ಮಲ್ಲೇಶಪ್ಪ ವಡ್ಡಿಗೇರಿ, ಬಸವರಾಜ ಓಲಿ, ಅಶೋಕ ಪತ್ರಿ, ಅಲ್ತಾಫ ಸಕಲಿ, ಬಸನಗೌಡ ಪಾಟೀಲ, ಮಂಜು ಜಾಧವ, ಪರಶುರಾಮ ಮೋಟೆ, ಮಹೇಶ ಗಾಯಕವಾಡ, ಮುತ್ತು ಕೊಳ್ಳಿ, ಸಿಕಂದರ ನವಲಗುಂದ ಇತರರಿದ್ದರು.
ಒಂದು ವಾರದೊಳಗೆ ಲಾರಿ, ಗೂಡ್ಸ್ ಪ್ಯಾಸೆಂಜರ್ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸುವ ನಿಯಮ ಸರಳಗೊಳಿಸದಿದ್ದರೆ ತಾಲೂಕು ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್.ಎಂ. ಪಾಣಿಗಟ್ಟಿ ಎಚ್ಚರಿಸಿದರು.