ಜಿಲ್ಲೆ

ವಿದ್ಯಾರ್ಥಿಗಳಿಗೆ ಸಂಶೋಧನಾ ಮನೋಭಾವ ಬೆಳೆಯಲಿ

ಲೋಕೇಶ್ ಮನು. ಡಿ

ಪಿರಿಯಾಪಟ್ಟಣ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸಂಶೋಧನಾ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಎಸ್.ವಿ.ಹಲಸೆ ಕಿವಿಮಾತು ಹೇಳಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ, ಈಕ್ವಾಲಿಟಿ ಇನ್‌ಸ್ಟಿಟ್ಯೂಟ್ ಫಾರ್ ಥಾಟ್ ಆ್ಯಂಡ್ ಆಕ್ಷನ್ ವತಿಯಿಂದ ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಲ್ಯಾಣ ಖಾತರಿ ಯೋಜನೆಗಳು ಮತ್ತು ಸಮಾನ ಅಭಿವೃದ್ಧಿ ವಿಷಯದ ಕುರಿತು ಏರ್ಪಡಿಸಿದ್ದ ಒಂದು ದಿನದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸುತ್ತಿರುವುದು ನಿಜಕ್ಕೂ ಪ್ರಸಂಶನೀಯ. ಗ್ರಾಮೀಣ ಪ್ರದೇಶದ ಮಕ್ಕಳು ಬಹಳ ಚುರುಕಾಗಿದ್ದಾರೆ ಮತ್ತು ಬುದ್ಧಿವಂತರಾಗಿದ್ದಾರೆ. ಅವರಿಗೂ ಈ ಸಮ್ಮೇಳನದ ಮಹತ್ವದ ಅರಿವಾಗಿದೆ ಎಂದರು.


ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಶ್ರುತಿ ಕಪಿಲಾ ಮಾತನಾಡಿ, ಅಸಮಾನತೆಯಿಂದ ಬಳಲುತ್ತಿದ್ದ ಭಾರತದಲ್ಲಿ ಜನರನ್ನು ಶೋಷಣೆಯಿಂದ ಮೇಲೆತ್ತಲು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಾಧ್ಯವಾಯಿತು. ಸಂವಿಧಾನದಿಂದ ಮಾತ್ರ ಸಮಾನತೆ, ಕ್ರಾಂತಿಕಾರಿಕ ಬದಲಾವಣೆಗಳನ್ನು ಕಾಣಲು ಸಾಧ್ಯವಾಗಿದೆ ಎಂದರು.


ಸಮ್ಮೇಳದಲ್ಲಿ ವಿಷಯದ ಕುರಿತು ಮಲೇಷ್ಯಾದ ಬೇಟಾ ಪರ್ಕಸಾ, ಬಾಂಗ್ಲಾದೇಶದ ಉಘಗೆ ಮುರ್ಮು ಅವರು ಮಾತನಾಡಿದರು. ಇಟಾ ಸಂಸ್ಥೆಯ ಅಧ್ಯಕ್ಷ ಡಾ.ಸುಮತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಅಂಬಿಕಾ, ಪ್ರಾಧ್ಯಾಪಕರಾದ ಡಾ.ಸುನಂದಾ, ಡಾ.ವಿಜಯಲಕ್ಷ್ಮೀ, ಪ್ರೊ.ರಾಜ್‌ಗೋಪಾಲ್, ಡಾ.ಗುರುಬಸವರಾಜಸ್ವಾಮಿ ಪಂಡಿತ, ಪ್ರೊ.ಪ್ರೇಮಕುಮಾರ ನಾಯಕ ಭಾಗವಹಿಸಿದ್ದರು.