ಕಡೂರಿನ ದೇವನೂರು ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು. ಎಚ್.ಡಿ.ತಮ್ಮಯ್ಯ, ಜಿ.ರಂಗನಾಥಸ್ವಾಮಿ, ಸುಮಿತ್ರಾ ವಿಜಯ್‌ಕುಮಾರ್, ಗಂಗಾಧರ್ ಮತ್ತಿತರಿದ್ದರು. 
ಜಿಲ್ಲೆ

ಗ್ರಾಮೀಣ ಭಾಗದ ನೈಜ ಪ್ರತಿಭೆ ಗುರುತಿಸುವ ಕಾರ್ಯವಾಗಲಿ

ಕಡೂರು: ಪ್ರತಿ ಮನೆಯನ್ನು ಸಂಪರ್ಕಿಸಿ ಸಂಪನ್ಮೂಲ ಕ್ರೋಡಿಕರಿಸಿಕೊಂಡು ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಗ್ರಾಮದ ಹಬ್ಬದಂತೆ ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ದೇವನೂರು ಗ್ರಾಮದಲ್ಲಿ ಮಂಗಳವಾರ ಜಿಪಂ, ತಾಪಂ, ಗ್ರಾಪಂ, ಶಿಕ್ಷಣ ಇಲಾಖೆ ಮತ್ತು ಶ್ರೀಲಕ್ಷ್ಮೀಶ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಸ್ಪರ್ಧಾ ಮನೋಭಾವನೆಯಿಂದ ಜಿಲ್ಲಾ ಮಟ್ಟದಲ್ಲೂ ಜಯಗಳಿಸಬೇಕು. ಗೆದ್ದವರು ಬೀಗದೆ, ಸೋತವರು ಬಾಗದೆ ನೈಜ ಆಟದೊಂದಿಗೆ ತಮ್ಮ ಉತ್ತಮ ಪ್ರದರ್ಶನ ನೀಡಬೇಕು. ತೀರ್ಪುಗಾರರು ತಾರತಮ್ಯದಿಂದ ತೀರ್ಪು ನೀಡಿದರೆ ನೈಜ ಪ್ರತಿಭೆಗೆ ಅನ್ಯಾಯವಾಗುತ್ತದೆ. ಕ್ರೀಡಾಸ್ಪೂರ್ತಿಯಿಂದ ನೈಜ ಪ್ರತಿಭೆ ಗುರುತಿಸುವ ಕಾರ್ಯವಾಗಬೇಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೇ.40 ಶಿಕ್ಷಕರಿಲ್ಲ. ಅದರಲ್ಲೂ ಬಹುತೇಕ ಕಡೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. ಅವರನ್ನು ಭರ್ತಿ ಮಾಡಿಕೊಳ್ಳುವ ಕೆಲಸ ಇಂದಿನವರೆಗೂ ಆಗಿಲ್ಲ. ಬೇರೆ ಬೇರೆ ವಿಷಯವನ್ನು ಬೋಧಿಸುವ ಶಿಕ್ಷಕರೇ ದೈಹಿಕ ಶಿಕ್ಷಕರ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಪರೀಕ್ಷೆಗಳಲ್ಲಿ ಅಭಿವೃದ್ಧಿ ಸಾಧಿಸುವುದು ಹೇಗೆ? ಶಿಕ್ಷಕರು ತಮ್ಮ ತಮ್ಮ ವಿಷಯಗಳನ್ನು ಬೋಧಿಸುವುದನ್ನು ಬಿಟ್ಟು ದೈಹಿಕ ಶಿಕ್ಷಕರ ಕೆಲಸ ಮಾಡುವಾಂತಾಗಿದೆ. ಪರೀಕ್ಷಾ ಲಿತಾಂಶ ಕಡಿಮೆಯಾದರೂ ಶಿಕ್ಷಕರನ್ನು ಹೊಣೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.