ವಿಜಯಪುರ: ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಯಾರೂ ರಾಜಕೀಯ ಮಾಡಬಾರದು. ದೇಶ ಮೊದಲು ಎಂಬ ತತ್ವ ನಮ್ಮದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಮಂಗಳವಾರ ಬಬಲೇಶ್ವರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮುಸ್ಲಿಂರು ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಯತ್ನಾಳ ಅವರು ಪ್ರವಾದಿ ಮೊಹ್ಮದ್ ಪೈಗಂಬರ್ ಕುರಿತು ನೀಡಿರುವ ಹೇಳಿಕೆ ಖಂಡಿಸುತ್ತೇನೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯತ್ನಾಳ ತಮ್ಮ ಮಾತಿನ ಮೇಲೆ ನಿಯಂತ್ರಣ ಹೊಂದಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಬಬಲೇಶ್ವರ ಮತಕ್ಷೇತ್ರ ಭಾವೈಕ್ಯತೆಗೆ ಹೆಸರಾಗಿದೆ. ಇಲ್ಲಿ ಹಿಂದು ಮತ್ತು ಮುಸ್ಲಿಂರು ಸೇರಿಕೊಂಡು ಜಾತ್ರೆ ಮತ್ತು ಉರುಸುಗಳನ್ನು ಆಚರಿಸುತ್ತಾರೆ. ಸಬ್ ಕಾ ಮಾಲೀಕ ಏಕ್ ಹೈ ಎಂಬಂತೆ ಮತಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮ ಮನೆತನವೂ ಸರ್ವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇಲ್ಲಿ ಸರ್ವ ಸಮಾಜದವರು ಸಹಬಾಳ್ವೆ ನಡೆಸುತ್ತಿದ್ದು, ಎಲ್ಲ ಕಾರ್ಯಕ್ರಮಗಳಲ್ಲಿ ಹಿಂದು-ಮುಸ್ಲಿಂರು ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತಾರೆ. ಓಟಿನ ಆಸೆಗಾಗಿ ನಾವು ಎಂದೂ ರಾಜಕಾರಣ ಮಾಡಿಲ್ಲ ಎಂದರು.
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಈ ಘಟನೆಯಲ್ಲಿ ಹುತಾತ್ಮರಾದವರ ಕುಟುಂಬದ ಪರ ಇಡೀ ದೇಶ ನಿಂತಿದೆ. ಕೇಂದ್ರ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ಕೇಂದ್ರದ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ಸುನೀಲಗೌಡ ಪಾಟೀಲ ಹೇಳಿದರು.
ಪ್ರತಿಭಟನೆ ಬಳಿಕ ಬಬಲೇಶ್ವರ್ ತಹಸೀಲ್ದಾರ್ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮುಖಂಡರಾದ ಯಾಕೂಬ್ ಜತ್ತಿ, ಡಾ. ಕೌಸರ್ ಅತ್ತಾರ, ಪೀರ ಪಟೇಲ, ವಿ.ಎಸ್. ಪಾಟೀಲ, ರಫೀಕ್ ಸೋನಾರ, ಸೈಯ್ಯದ್ ಆಸಿಫುಲ್ಲಾ ಖಾದ್ರಿ, ಶಕೀಲ ಬಾಗಮಾರೆ, ಅಶೋಕ ಕಾಖಂಡಕಿ, ಸೋಮಶೇಖರ ಕೋಟ್ಯಾಳ, ಆನಂದ ಬೂದಿಹಾಳ, ಈರಗೊಂಡ ಬಿರಾದಾರ, ಶಕೀಲ ಬಾಗಮಾರೆ, ಅಕ್ಬರ್ ಗೋಕಾವಿ, ಲಾಲಸಾಬ್ ಜಮಾದಾರ, ಜಾಫರ್ ಇನಾಮದಾರ, ಅಶ್ಫಾಕ್ ಜಹಾಗೀರದಾರ, ಅಲ್ಲಿಸಾಬ ಖಡಕೆ ಮತ್ತಿತರರಿದ್ದರು.