ಜಿಲ್ಲೆ

ಸರ್ಕಾರ ಖರೀದಿಸುವ ಹಾಲಿನ ದರ ಹೆಚ್ಚಲಿ

ಶಿಡ್ಲಘಟ್ಟ ತಾಲೂಕು ಜೆ.ವೆಂಕಟಾಪುರದಲ್ಲಿ ನಿರ್ಮಿಸಿರುವ ಕ್ಷೀರ ಭವನವನ್ನು ಶಾಸಕ ಬಿ.ಎನ್​.ರವಿಕುಮಾರ್​ ಉದ್ಘಾಟಿಸಿದರು. ಡೇರಿ ಅಧ್ಯಕ್ಷ ಎಂ.ಶಿವಕುಮಾರ್​, ಮಾಜಿ ಅಧ್ಯಕ್ಷ ಡಿ.ವಿ.ಶ್ರೀನಿವಾಸಪ್ಪ, ಕೆಎಂಎಫ್​ ನಿರ್ದೇಶಕ ಶ್ರೀನಿವಾಸ್​ರಾಮಯ್ಯ, ಕೋಚಿಮುಲ್​ ಮಾಜಿ ನಿರ್ದೇಶಕ ಬಂಕ್​ ಮುನಿಯಪ್ಪ ಇತರರು ಇದ್ದರು.


ಕ್ಷೀರ ಭವನ ಉದ್ಘಾಟನೆಯವಲ್ಲಿ ಶಾಸಕ ಬಿ.ಎನ್​.ರವಿಕುಮಾರ್​ ಆಗ್ರಹ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ದಿನದಿಂದ ದಿನಕ್ಕೆ ಹಾಲು ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಹೈನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರಿಂದ ಖರೀದಿಸುವ ಹಾಲಿಗೆ ಬೆಲೆ ಹಾಗೂ ಪ್ರೋತ್ಸಾಹ ಧನ ಹೆಚ್ಚಿಸಬೇಕು ಎಂದು ಶಾಸಕ ಬಿ.ಎನ್​.ರವಿಕುಮಾರ್​ ಆಗ್ರಹಿಸಿದರು.
ತಾಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರದಲ್ಲಿ ಬುಧವಾರ ನೂತನವಾಗಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕ್ಷೀರ ಭವನ ಉದ್ಘಾಟಿಸಿ ಮಾತನಾಡಿ, ಪ್ರತಿ ಲೀಟರ್​ ಹಾಲನ್ನು ಉತ್ಪಾದಿಸಬೇಕಾದರೆ ರೈತನಿಗೆ 25 ರೂ. ಖರ್ಚು ಬರುತ್ತಿದೆ. ಆದರೆ ಸರ್ಕಾರ ನೀಡುತ್ತಿರುವುದು ಕೇವಲ 32-&35 ರೂ. ಹಾಗಾಗಿ ರೈತನಿಂದ ಖರೀದಿಸುವ ಹಾಲಿಗೆ ಬೆಲೆ ಹೆಚ್ಚಿಸಬೇಕು ಮತ್ತು ಪ್ರೋತ್ಸಾಹ ಧನವನ್ನು 10ರಿಂದ 20 ರೂ.ಗೆ ಹೆಚ್ಚಿಸಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಯೋಜನೆ ಹೊಂದಿದ್ದೇವೆ ಎಂದರು.

ಹಾಲು ಉತ್ಪಾದನೆ ಕ್ಷೀಣ
ಜಿಲ್ಲೆಯ ಸಾಕಷ್ಟು ರೈತರು ಸೀಮೆ ಹಸುಗಳನ್ನು ನೆರೆಯ ಆಂಧ್ರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿತಂಲೂ ಈ ವರ್ಷ ಹಾಲಿನ ಉತ್ಪಾದನೆ ಕಡಿಮೆ ಆಗಿರುವುದು ಅಂಂಕಿ ಅಂಶಗಳಿಂದ ತಿಳಿದು ಬಂದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಎರಡು ದಶಕಗಳಲ್ಲಿ ಹಾಲನ್ನು ಉತ್ಪಾದಿಸುವ ರೈತರೇ ಇಲ್ಲದೆ ಹೈನುಗಾರಿಕೆ ತೊರೆಯಬೇಕಾಗುತ್ತದೆ. ಬೇರೆ ರಾಜ್ಯ ಹಾಗೂ ದೇಶಗಳಿಂದ ಹಾಲನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ಡೇರಿ ಅಧ್ಯಕ್ಷ ಎಂ.ಶಿವಕುಮಾರ್​, ಮಾಜಿ ಅಧ್ಯಕ್ಷ ಡಿ.ವಿ.ಶ್ರೀನಿವಾಸಪ್ಪ, ಕೆಎಂಎಫ್​ ನಿರ್ದೇಶಕ ಶ್ರೀನಿವಾಸ್​ರಾಮಯ್ಯ, ಕೋಚಿಮುಲ್​ ಮಾಜಿ ನಿರ್ದೇಶಕ ಬಂಕ್​ ಮುನಿಯಪ್ಪ, ತಾದೂರು ರಘು, ಕೋಚಿಮುಲ್​ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಕಿರಣ್​ಕುಮಾರ್​, ಪಶುವೈದ್ಯೆ ಡಾ.ಪ್ರಮೀಳಾ, ಮೇಲ್ವಿಚಾರಕ ಉಮೇಶ್​, ಮುಖಂಡರಾದ ಹೇಮಂತ್​, ಚಂದ್ರೇಗೌಡ, ಕಲ್ಯಾಪುರ ಆಂಜಿನಪ್ಪ, ಮಿತ್ತನಹಳ್ಳಿ ದೇವರಾಜ್​, ಟಿ.ಕೃಷ್ಣ್ಣಪ್ಪ ಇದ್ದರು.