ದೇವದುರ್ಗ: ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಹಾಗೂ ಲಿಂಗಪತ್ತೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ದುರ್ಬಳಕೆಗೆ 3ವರ್ಷ ಜೈಲುಶಿಕ್ಷೆ, 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಭ್ರೂಣಹತ್ಯೆಗೆ ಸಹಕಾರ ನೀಡಿದ ವೈದ್ಯರಿಗೆ 3ವರ್ಷ ಜೈಲು, 10ಸಾವಿರ ರೂ. ದಂಡ ಹಾಗೂ ರಾಜ್ಯ ವೈದ್ಯಕೀಯ ಮಂಡಳಿಯಿಂದ 5ವರ್ಷ ನಿಷೇಧ ಶಿಕ್ಷೆ ಇರಲಿದೆ.
2ನೇ ಅಪರಾಧಕ್ಕೆ 5ವರ್ಷ ಜೈಲು, 50ಸಾವಿರ ರೂ.ದಂಡ ಹಾಗೂ ಅಂತಹ ವೈದ್ಯರನ್ನು ಶಾಶ್ವತವಾಗಿ ವೈದ್ಯಕೀಯ ಮಂಡಳಿಯಿಂದ ಹೆಸರು ತೆಗೆದು ಹಾಕುವ ಕಠಿಣ ಕಾನೂನು ಇದೆ. ಜನರು ಗಂಡು-ಹೆಣ್ಣು ಎನ್ನುವ ಭೇದ-ಭಾವ ಮಾಡದೇ ಇಬ್ಬರೂ ಸಮಾನರು ಎಂದು ತಿಳಿಯಬೇಕು ಎಂದರು.