ಜಿಲ್ಲೆ

ಬಡವರು, ರೈತರನ್ನು ಶೋಷಿಸದೆ ಬದುಕಲು ಬಿಡಿ

ರಾಜಣ್ಣ

ಶ್ರೀರಂಗಪಟ್ಟಣ: ಪ್ರಜಾಪ್ರಭುತ್ವ ವ್ಯವಸ್ಥೆಯ ದೊರೆಗಳು ಮೈಸೂರು ಮಹಾರಾಜರನ್ನೇ ಮೀರಿಸುವಂತೆ ಆಸ್ತಿಪಾಸ್ತಿ ಮಾಡುವಲ್ಲಿ ನಿರತರಾಗಿದ್ದು, ನಾಡಿನ ಬಡವರು ಹಾಗೂ ರೈತಾಪಿ ಜನರನ್ನು ಶೋಷಣೆಗೊಳಪಡಿಸುವುದನ್ನು ಬಿಟ್ಟು ಬದುಕಲು ಅವಕಾಶ ನೀಡಿ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.


ಪಟ್ಟಣದ ಕುವೆಂಪು ವೃತ್ತದಲ್ಲಿ ಸೋಮವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಬಾರುಕೋಲು, ಗಂಟೆ, ತಲೆಯ ಮೇಲೆ ಕಲ್ಲು ಚಪ್ಪಡಿ ಹಾಗೂ ನೇಣು ಕುಣಿಕೆ ಹಿಡಿದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿಯ ಮುಂಭಾಗ 50ನೇ ದಿನದ ಪ್ರತಿಭಟನಾ ಧರಣಿಯಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹೋರಾಟ ಸಮರ್ಪಿಸಿ ಮಾತನಾಡಿದರು.


ಮೈಸೂರು ಮಹಾರಾಜರ ಅರಸು ಮನೆತನ ಅರಮನೆಯ ವಜ್ರ, ವೈಢೂರ‌್ಯ ಒಡವೆ ಮಾರಿ ತಂದ ಹಣದಿಂದ ನಾಡು-ನುಡು ಕಟ್ಟಿ, ನಾಡ ಜನರಿಗೆ ಕೃಷಿ, ಕುಡಿಯಲು ನೀರು, ವಿದ್ಯುತ್, ಆಸ್ಪತ್ರೆ ಸೇರಿದಂತೆ ನೂರೆಂಟು ಸೇವೆಗಳನ್ನು ನೀಡಿ ಕನ್ನಡಿಗರ ಬದಕನ್ನು ಹಸನುಗೊಳಿಸಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ಆಳಿದ ಎಲ್ಲ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸ್ವೇಚ್ಚಾಚಾರದಿಂದ ಲೂಟಿಗೆ ನಿಂತು, ಭ್ರಷ್ಟಾಚಾರದ ಹಣ ಗಳಿಸಿ ಕುಬೇರರಾಗಿದ್ದಾರೆ ಎಂದರು.


ನಾಡಿನ ಜನರು ಮತ್ತು ರೈತರಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಕನ್ನಂಬಾಡಿ ಅಣೆಕಟ್ಟು ಕಟ್ಟಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಲ್ಲಿನ ಕೇವಲ 5 ಆದರ್ಶ ಗುಣಗಳನ್ನು ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರ ಮೈಗೂಡಿಸಿಕೊಂಡು ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಹಿತ ಆಡಳಿತ ನೀಡಬೇಕು. ಕಾವೇರಿ ಅಚ್ಚಕಟ್ಟು ಪ್ರದೇಶದ ಎಲ್ಲ ರೈತರು ಅಕ್ಷರ ಸಹ ನಷ್ಟಕ್ಕೆ ಸಿಲುಕಲಿದ್ದು, ನಮ್ಮಂತೆಯೇ ರಾಜ್ಯದಲ್ಲಿ ಕಷ್ಟಕ್ಕೆ ಒಳಗಾದ ಎಲ್ಲ ರೈತರಿಗೆ ವೈಜ್ಞಾನಿಕ ದರಪಟ್ಟಿ ಅನ್ವಯ ಸಮರ್ಪಕ ಬೆಳೆ ಪರಿಹಾರವನ್ನು ಶೀಘ್ರ ನೀಡಬೇಕು, ಇಲ್ಲವಾದಲ್ಲಿ ಹೋರಾಟ ಪುನಃ ಮುಂದುವರಿಯಲಿದೆ ಎಂದು ಆಗ್ರಹಿಸಿ ಹೋರಾಟವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು.


ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಪುಟ್ಟಮಾದು, ಸಂಘಟನಾ ಸಂಚಾಲಕ ಹಳುವಳ್ಳಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ರಾಮಚಂದ್ರು, ಪದಾಧಿಕಾರಿಗಳಾದ ದರಸಗುಪ್ಪೆ ಸುರೇಶ್, ಬಲ್ಲೇನಹಳ್ಳಿ ಮಂಜುನಾಥ್, ಮಾರಸಿಂಗನಹಳ್ಳಿ ಚಿಕ್ಕತಿಮ್ಮೇಗೌಡ, ಸಿದ್ದಪ್ಪ, ಹೆಮ್ಮಿಗೆ ಕೃಷ್ಣ, ಬೆಳಗೊಳ ಸುನೀಲ್, ಕಡತನಾಳು ಶ್ರೀಧರ್, ಬಾಬು, ಚಾಮರಾಜು, ಬಲ್ಲೇನಹಳ್ಳಿ ಕೃಷ್ಣ, ಕುಮಾರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.