ಜಿಲ್ಲೆ

ಟಿಎಸ್​ಎಸ್ ಸಂಸ್ಥೆಯಿಂದ ಬಡವರಿಗೆ ನ್ಯಾಯ ಸಿಗಲಿ

Gadag - Desk - Tippanna Avadoot

ಸಿದ್ದಾಪುರ: ಹಲವು ಜನರಿಗೆ ಅನ್ನ ನೀಡುತ್ತಿರುವ ಟಿಎಸ್​ಎಸ್ ಸಂಸ್ಥೆ ಬೆಳೆಯಬೇಕು. ಟಿಎಸ್​ಎಸ್ ಹೆಸರನ್ನು ಉಳಿಸಬೇಕು. ಸಂಸ್ಥೆಯಿಂದ ಬಡವರಿಗೆ ನ್ಯಾಯ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.


ತಾಲೂಕಿನ ಹಾರ್ಸಿಕಟ್ಟಾದಲ್ಲಿ ಸ್ಥಳೀಯ ಅಘನಾಶಿನಿ ಸ್ಪೈಸಸ್ ಪೊ›ಡ್ಯೂಸರ್ ಕಂಪನಿಯ ವ್ಯಾಪಾರಿ ಅಂಗಳ ಉದ್ಘಾಟನೆ ಮತ್ತು ವಸುಂಧರಾ ಗಾರ್ಡನ್ ಸ್ಪೆಷಲ್ ಸಾವಯವ ಗೊಬ್ಬರ ಬಿಡುಗಡೆ ಮಾಡಿ ಅವರು ಶನಿವಾರ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಅಡಕೆ ಬೆಳೆಯೊಂದಿಗೆ ಪಾರ್ಯಾಯ ಬೆಳೆ ಹಾಗೂ ಉಪಬೆಳೆ ಬೆಳೆಯಲು ರೈತರು ಮುಂದಾಗಬೇಕು. ಸಹಕಾರಿ ಸಂಘಗಳು ರೈತರಿಗೆ ಆರ್ಥಿಕ ಸಹಕಾರ ನೀಡುವುದರೊಂದಿಗೆ ಕೃಷಿ ವಿಸ್ತರಣೆಗೆ ಅವಕಾಶ ನೀಡಬೇಕು. ಬೆಟ್ಟ ಭೂಮಿ ರೈತರಿಗೆ ಸಿಗುವಂತಾಗಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.


ಟಿಎಸ್​ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಟಿಎಸ್​ಎಸ್​ಗೆ ಸದಸ್ಯರ ಬೆಂಬಲ ಇದ್ದರೆ ಹಾಗೂ ವಿಶ್ವಾಸ ಇದ್ದರೆ ಯಾವುದೇ ಸಮಯದಲ್ಲಿಯೂ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತೇವೆ. ಅಡಕೆಗೆ ಹಬ್ಬಿರುವ ಎಲೆ ಚುಕ್ಕೆ ರೋಗದ ಸರ್ವೆ ಮಾಡಲು ಸರ್ಕಾರ ಮುಂದೆ ಬರಬೇಕಾಗಿದೆ. ರೈತ ಉಪತ್ಪಾದಕ ಕಂಪನಿಯ ಉಪಯೋಗವನ್ನು ಎಲ್ಲ ಸದಸ್ಯರು ಪಡೆದುಕೊಳ್ಳಬೇಕೆಂದರು. ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಗೌಡರ್ ಮುಠ್ಠಳ್ಳಿ ಉಪಸ್ಥಿತರಿದ್ದರು.


ಟಿಎಸ್​ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ನಿರ್ದೇಶಕರಾದ ರವೀಂದ್ರ ಹೆಗಡೆ ಹಿರೇಕೈ, ವಸುಮತಿ ಬಾಲಚಂದ್ರ ಭಟ್ಟ, ಅಶೋಕ ಹೆಗಡೆ ಅಬ್ಬಿಗದ್ದೆ ಅವರನ್ನು ಅಭಿನಂದಿಸಿಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಹೆಗಡೆ ಕುಂಬಾರಕುಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೇಶ ಹೆಗಡೆ, ಡಾ. ರವೀಂದ್ರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.