ಜಿಲ್ಲೆ

ಪೊಲೀಸರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲಿ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಲಹೆ

ಮೈಸೂರು: ಪ್ರವಾಸಿ ತಾಣವಾಗಿರುವ ಮೈಸೂರಿಗೆ ದೇಶ, ವಿದೇಶದಿಂದ ಪ್ರವಾಸಿಗರು ಬರುವುದರಿಂದ ಪೊಲೀಸರು ವೃತ್ತಿಪರತೆ ಜತೆಗೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ನಗರ ಪೊಲೀಸ್‌ನಿಂದ ನಗರ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಪ್ರವಾಸಿಗರ ಮೈಸೂರು ಭೇಟಿ ಅವಿಸ್ಮರಣೀಯ ಆಗಿರಬೇಕಿದ್ದು, ಸಹಾಯವಾಗುವ ರೀತಿಯಲ್ಲಿ ಪೊಲೀಸರು ವರ್ತಿಸಬೇಕು. ಹೀಗಾಗಿ ನಗರದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣವಾಗಬೇಕು. ವೃತ್ತಿಪರತೆ, ಸೇವಾ ಮನೋಭಾವವೂ ಬೇಕು ಎಂದು ಸಲಹೆ ನೀಡಿದರು.
ಶಿಷ್ಟಾಚಾರ ಕರ್ತವ್ಯಗಳು, ಪ್ರವಾಸೋದ್ಯಮ ಅವಕಾಶಗಳು, ನಾಡಹಬ್ಬ ದಸರಾ ಕರ್ತವ್ಯ ಹೆಚ್ಚಿವೆ. ಹೀಗಾಗಿ ಬೇರೆ ಜಿಲ್ಲೆಗಳಲ್ಲಿ ರಜೆ ಬಂದರೇ ಹೊರ ಹೊಗುವ ಅವಕಾಶಗಳಿದ್ದರೆ ಮೈಸೂರಿನಲ್ಲಿ ಪೊಲೀಸರಿಗೆ ಅಂತಹ ಅವಕಾಶವಿಲ್ಲ. ರಜೆ ಬಂದಾಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಪೊಲೀಸರ ಮೇಲೆ ಒತ್ತಡ ಇರುತ್ತದೆ ಎಂದರು.
ಪೊಲೀಸರು ಸಂಚಾರ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿರುತ್ತೀರಿ. ಇದಕ್ಕೆ ಪೊಲೀಸ್ ಕ್ರೀಡಾಕೂಟ ಸಹಾಯವಾಗುತ್ತದೆ. ಕ್ರೀಡಾಸ್ಫೂರ್ತಿ ಪ್ರದರ್ಶನ ಮಾಡುತ್ತ ಸೇವೆಗೆ ನೆರವಾಗಲಿ ಎಂದು ಆಶಿಸಿದರು.
ಕ್ರೀಡಾಕೂಟಗಳು ದೈಹಿಕ ಆರೋಗ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಒತ್ತಡ ಮರೆಯಲು ಉತ್ತಮ ಅವಕಾಶ. ಸಂಪೂರ್ಣವಾಗಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ಮೂಲಕ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ, ಮಾರುತಿ ಇತರರು ಇದ್ದರು.
ಕ್ರೀಡಾಕೂಟದಲ್ಲಿ ಸಿಎಆರ್, ನರಸಿಂಹರಾಜ ಉಪವಿಭಾಗ, ಕೃಷ್ಣರಾಜ ಉಪವಿಭಾಗ, ದೇವರಾಜ ಉಪವಿಭಾಗ, ವಿಜಯನಗರ ಉಪ ವಿಭಾಗ, ಸಂಚಾರ ಉಪವಿಭಾಗ, ವಿಶೇಷ ಪಡೆ, ಮಹಿಳಾ ಪಡೆ, ಅಶ್ವರೋಹಿ ದಳದ ಸಿಬ್ಬಂದಿ ಭಾಗವಹಿಸಿದ್ದರು.