ವಿರಾಜಪೇಟೆ: ಸಮಾಜದಲ್ಲಿ ಹಲವು ಬಹುಮುಖ ಪ್ರತಿಭೆಗಳಿವೆ. ಆದರೆ ಎಲೆಮರೆ ಕಾಯಿಯಂತೆ ಪ್ರತಿಭೆಗಳು ಅನಾವರಣವಾಗದೆ, ಉತ್ತೇಜನ ದೊರಕದೆ ಆರಂಭ ಹಂತದಲ್ಲೇ ಮರೆಯಾಗುತ್ತಿವೆ. ಪತ್ರಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವ ಕಾರ್ಯಕ್ಕೆ ಸಂಘ, ಸಂಸ್ಥೆಗಳು ಮುಂದಾಗಬೇಕು ಎಂದು ಡಿ. ಕೋಚ್ ಸಂಸ್ಥೆಯ ಸಂಸ್ಥಾಪಕ ಕುಂಡಚ್ಚಿರ ನಿತೀನ್ ಹೇಳಿದರು.
ಅವೇಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ವಿರಾಜಪೇಟೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕೊಡಗು ಬಾಸ್ಕೆಟ್ ಬಾಲ್ ಲೀಗ್ 2ನೇ ಆವೃತ್ತಿ ಆಟಗಾರರ ಬಿಡ್ಡಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಹಾಕಿ, ಫುಟ್ಬಾಲ್, ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಪ್ರೋತ್ಸಾಹ ಲಭಿಸುತ್ತಿದೆ. ಅದರಂತೆ ಬಾಸ್ಕೆಟ್‌ಬಾಲ್ ಕ್ರೀಡೆಗೂ ಪ್ರೋತ್ಸಾಹ ಲಭಿಸುವಂತಾಗಬೇಕು. ಸ್ಥಳೀಯ ಆಟಗಾರರು ದೇಶಿಯ ಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಸಾಧ್ಯವಾಗದಿರಬಹುದು. ಆದರೆ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಸಕ್ತಿ ತೋರುವಂತೆ ಉತ್ತೇಜಿಸಬಹುದು ಎಂದರು.
ಅವೇಂಜರ್ಸ್ ಬಾಸ್ಕೆಟ್‌ಬಾಲ್ ಕ್ಲಬ್ ವಿರಾಜಪೇಟೆ ಸಂಚಾಲಕ ಇರ್ಷಾದ್ (ಇಚ್ಚು) ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ತನ್ನ ಎರಡನೇ ಆವೃತ್ತಿಯಾದ ಕೊಡಗು ಬಾಸ್ಕೆಟ್ ಬಾಲ್ ಲೀಗ್ ಪಂದ್ಯಾಟವನ್ನು ಮೇ 18ರಂದು ವಿರಾಜಪೇಟೆ ನಗರದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿದೆ. ಜಿಲ್ಲೆಯ ಮಾರ್ಷಲ್ಸ್ ಮಡಿಕೇರಿ, ಟೀಗಲ್ಸ್ ಹೂಫ್ ಸ್ಟಾರ್ ಪೊನ್ನಂಪೇಟೆ, ಕೂರ್ಗ ಯುನೈಟೆಡ್ ಪೊನ್ನಂಪೇಟೆ, ಬ್ಲಾಕ್ ಕೋಬ್ರಾಸ್ ವಿ.ಪೇಟೆ. ಏಷಿಯನ್ ಹಾರ್ಡ್‌ವೇರ್ ವಿ.ಪೇಟೆ, ಡಿ.ಕೋಚ್ ಗೋಣಿಕೊಪ್ಪ ಒಟ್ಟು 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. 6 ತಂಡಗಳಿಂದ ಒಟ್ಟು ಕೊಡಗು ಜಿಲ್ಲೆ ಮೂಲದ 60 ಆಟಗಾರರು ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡ ಎಜಾಜ್ ಅಹಮ್ಮದ್, ಮೆಟ್ರೋ ಹಾರ್ಡ್‌ವೇರ್ ಮಾಲೀಕ ಅಖೀಲ್, ಸಮಾಜ ಸೇವಕ ರವೂಫ್ ಅವರು ಉಪಸ್ಥಿತರಿದ್ದರು.
ಅವೇಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ವಿರಾಜಪೇಟೆ ಸಂಸ್ಥೆಯ ಮಾದಂಡ ತಿಮ್ಮಯ್ಯ, ನೌಷೀಬ್ ಮತ್ತು ವಿವಿಧ ತಂಡಗಳ ಮಾಲೀಕರು ಹಾಗೂ ಆಟಗಾರರು ಹಾಜರಿದ್ದರು.