ಬಿಟ್ಟಂಗಾಲ-ಆಂಬಟ್ಟಿ ಗ್ರಾಮದ ಶ್ರೀ ನಾರಾಯಣ ಗುರು ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಲ್ಲವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಸಮಾಜ ಸೇವೆಗೆ ಬಿಲ್ಲವರು ಕೈಜೋಡಿಸಲಿ

ಅಭಿನಯ್ ಎಚ್.ಎಂ

ವಿರಾಜಪೇಟೆ; ಬಿಟ್ಟಂಗಾಲ-ಆಂಬಟ್ಟಿ ಗ್ರಾಮದಲ್ಲಿರುವ ನಾರಾಯಣ ಗುರು ಮಂದಿರದಲ್ಲಿ ಮಂಗಳವಾರ ಶ್ರೀ ನಾರಾಯಣ ಗುರು ಜಯಂತಿಯನ್ನು ತಾಲೂಕು ಬಿಲ್ಲವ ಸೇವಾ ಸಂಘದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ತಾಲೂಕು ಬಿಲ್ಲವ ಸೇವಾ ಸಂಘದ ಅದ್ಯಕ್ಷ ಬಿ.ಎಂ.ಗಣೇಶ್, ಶೋಷಿತ ಸಮುದಾಯವನ್ನು ಉತ್ತುಂಗಕ್ಕೆ ತರುವ ನಿಟ್ಟಿನಲ್ಲಿ ನಾರಾಯಣ ಗುರುಗಳ ಶ್ರಮ ಅಪಾರ. ಜಾತೀಯತೆ ಅನುಸರಿಸುತ್ತಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ಸ್ಥಾಪನೆ ಮಾಡಿ ಶೋಷಿತರು ದೇಗುಲ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟರು ಎಂದು ಸ್ಮರಿಸಿದರು.

ಸಮಾಜ ಸುಧಾರಣೆಗಾಗಿ ಜೀವನವನ್ನು ಮುಡಿಪಾಗಿಟ್ಟ ಇಂತಹವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಿಲ್ಲವ ಸಮುದಾಯ ಸಮಾಜ ಸೇವಾ ಕಾರ್ಯಗಳಿಗೆ ಕೈಜೋಡಿಸಿದಲ್ಲಿ ಮಾತ್ರ ಸಂಘದ ಕಾರ್ಯ ಚಟುವಟಿಕೆಗಳು ಮುಂದೆ ಸಾಗಲು ಸಾಧ್ಯ ಎಂದು ಹೇಳಿದರು.

ನಿವೃತ್ತ ಸೈನಿಕ ಮೊಣ್ಣಪ್ಪ ಪೂಜಾರಿ, ನಿವೃತ್ತ ಶಿಕ್ಷಕಿ ಸುನಂದಾ, ವಕೀಲ ಅಮೃತ್ ಸೋಮಯ್ಯ ಮಾತನಾಡಿದರು. ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಾರಾಯಣ ಗುರು ಪ್ರತಿಮೆಗೆ ಸಮುದಾಯದವರು ಮಾಲರ್ಪಣೆ ಮಾಡಿದರು. ಜನಾಂಗದ ಪ್ರಮುಖರಿಂದ ದೀಪ ಬೆಳಗಿಸಿದ ಬಳಿಕ ಸಂಘದ ಅಧ್ಯಕ್ಷರಿಂದ ದೀಪಾರತಿ ಮಾಡಲಾಯಿತು. ವೇದಿಕೆಯಲ್ಲಿ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಬಿ.ಆರ್.ರಾಜ, ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಜನಾರ್ದನ್ , ಕೋಶಾಧಿಕಾರಿ ಸತೀಶ್, ಕೆ.ಡಿ.ಸಿ.ಸಿ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಎನ್.ಕೆ.ಮೋಹನ್ ಉಪಸ್ಥಿತರಿದ್ದರು.