ಅಥಣಿ: ಚಿಕ್ಕೋಡಿ ಉಪವಿಭಾಗಾಕಾರಿ, ಪುರಸಭೆ ಆಡಳಿತಾಕಾರಿ ಮಾಧವ ಗಿತ್ತೆ ಅವರು ಶುಕ್ರವಾರ ಬೆಳಗ್ಗೆ ಅಥಣಿ ಪಟ್ಟಣದ ಜೋಡು ಕೆರೆ, ಹಳೇ ಪುರಸಭೆ ಕಟ್ಟಡ ಸೇರಿ ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯವನ್ನು ಮುಖ್ಯಾಕಾರಿ ಅಶೋಕ ಗುಡಿಮನಿ ಅವರೊಂದಿಗೆ ಪರಿಶೀಲಿಸಿದರು.
ಪುರಸಭೆಯಿಂದ ನಡೆಯುತ್ತಿರುವ ಜೋಡು ಕೆರೆ ಸ್ವಚ್ಛತಾ ವೀಕ್ಷಿಸಿದ ಅವರು, ಎರಡು ಕೆರೆಗಳ ಸುತ್ತ ವಾಕ್ ಪಥ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪುರಸಭೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಗಿತ್ತೆ ಮನವಿ ಮಾಡಿದರು.
ಅಥಣಿ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿರುವ ಪುರಸಭೆಯ ಹಳೇ ಕಟ್ಟಡ ವೀಕ್ಷಿಸಿದ ಎಸಿ, ಹಳೆಯ ಕಟ್ಟಡ ಶಿಥಿಲಗೊಂಡಿದ್ದು ಅದನ್ನು ತಕ್ಷಣ ತೆರವುಗೊಳಿಸಿ ಸುಸಜ್ಜಿತವಾದ ವಾಣಿಜ್ಯ ಮಳಿಗೆ ನಿರ್ಮಿಸಿ ಎಂದು ಪುರಸಭೆ ಅಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದಿಂದ ಬರುವ ಮಹಿಳೆಯರಿಗೆ ತುಂಬ ತೊಂದರೆಯಾಗುತ್ತದೆ. ಹಾಗಾಗಿ, ಮಹಿಳೆಯರಿಗಾಗಿ ಮಾರುಕಟ್ಟೆ ಪ್ರದೇಶದಲ್ಲಿ ಶೌಚಗೃಹ ನಿರ್ಮಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ಎಸಿ, ಕೂಡಲೆ ಶೌಚಗೃಹ ನಿರ್ಮಿಸಬೇಕೆಂದು ಅಕಾರಿಗಳಿಗೆ ಸೂಚನೆ ನೀಡಿದರು. ಪುರಸಭೆ ಅಭಿಯಂತ ಎಂ.ಎಚ್.ದೊಡಮನಿ, ಆರೋಗ್ಯಾಕಾರಿ ರವೀಂದ್ರ ಸಮಗೊಂಡ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.