ಮೈಸೂರು: ದುಡಿಯುವ ಜನರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ವತಿಯಿಂದ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ದೇಶದ ಜನರಿಗೆ ಒಳ್ಳೆಯ ದಿನಗಳನ್ನು ಕೊಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಗಳನ್ನೇ ಅನುಸರಿಸಿ ದುಡಿಯುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸಂಸತ್ತಿನಲ್ಲಿ ಬಹುಸಂಖ್ಯಾತ ಬಲವಿದೆ ಎಂಬ ಗರ್ವದಿಂದ ದೇಶದ ಜನರ ಅಭಿಪ್ರಾಯ ಬದಿಗೊತ್ತಿ ವಿದೇಶಿ ಮಾಲೀಕರಿಗೆ ವಾಣಿಜ್ಯ ಹಾಗೂ ವ್ಯಾಪಾರ ಸುಗಮಗೊಳಿಸುತ್ತಿದೆ ಎಂದು ಕಿಡಿಕಾರಿದರು.
ಎಲ್ಲರಿಗೂ ಕಾಯಂ ಉದ್ಯೋಗ ಒದಗಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಪಿಂಚಣಿದಾರರಿಗೆ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ 10 ಸಾವಿರ ರೂ. ಕನಿಷ್ಠ ಪಿಂಚಣಿ ನೀಡಬೇಕು. ರಾಷ್ಟ್ರೀಯ ಕನಿಷ್ಠ ವೇತನವನ್ನು 28 ಸಾವಿರಕ್ಕೆ ಏರಿಕೆ ಮಾಡಬೇಕು. ಬೆಲೆ ಏರಿಕೆ ನಿಯಂತ್ರಿಸಿ, ಆಹಾರ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕು. ಎಲ್ಲ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷೆ ಯಶೋದರಾ, ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಸದಸ್ಯರಾದ ಹರೀಶ್, ಸಂಧ್ಯಾ, ನಾಗೇಶ್‌ಮೂರ್ತಿ ಇತರರಿದ್ದರು.