ಮಾಗಡಿ : ನಾಗಮಂಗಲ ಘಟನೆ ಖಂಡನೀಯ. ಅಂತಹ ಪ್ರಕರಣಗಳು ಮರುಕಳಿಸಬಾರದು. ಪೊಲೀಸ್ ಇಲಾಖೆ, ತಾಲೂಕು, ಜಿಲ್ಲಾಡಳಿತ ಇದರ ಜವಾಬ್ದಾರಿ ಹೊರಬೇಕೆಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಪಟ್ಟಣದ ಶ್ರೀ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಏರ್ಪಡಿಸಿದ್ದ ಹಿಂದು ಮಹಾಗಣಪತಿ ಗಣೇಶೋತ್ಸವದಲ್ಲಿ ಶುಕ್ರವಾರ ರಾತ್ರಿ ಮಾತನಾಡಿದ ಅವರು, ಇದು ಸಮಾಜದ ಸಾಮರಸ್ಯ ಕೆದಕುವ ಘಟನೆ. ಕಳೆದ ವರ್ಷವೂ ಅದೇ ಸ್ಥಳದಲ್ಲಿ ಈ ರೀತಿಯ ಘಟನೆ ನಡೆದಿದೆ. ಆದರೂ, ಎಚ್ಚೆತ್ತುಕೊಂಡಿಲ್ಲ. ಇದನ್ನು ನೋಡಿದರೆ ತಾಲೂಕು, ಜಿಲ್ಲಾಡಳಿತ ಎಡವಿದೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಹೈಕಮಾಂಡ್ ನಿರ್ಧಾರ: ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಸ್ಪರ್ಧೆಮಾಡಬೇಕು ಎಂದು ಜೆಡಿಎಸ್ -ಬಿಜೆಪಿ ಹೈಕಮಾಂಡ್ ತೀರ್ಮಾನಿಸಲಿದ್ದಾರೆ ಎಂದು ಸಂಸದರು ತಿಳಿಸಿದರು.
28 ಸಂಸದರಲ್ಲಿ ನಾನು ಹೆಚ್ಚು ಸಕ್ರಿಯವಾಗಿದ್ದೇನೆಂದು ಎಲ್ಲರೂ ಹೇಳುತ್ತಾರೆ. ಸಂಸದನಾಗಿ 100 ದಿನದಲ್ಲಿ ಮಹತ್ವಾಕಾಂಕ್ಷೆ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ತಂದಿದ್ದೇನೆ. ಯಾವುದೇ ವ್ಯಕ್ತಿ ಇಷ್ಟಪಟ್ಟರೆ ಅವರು ಮಾಡುವ ಕೆಲಸಗಳು ಚೆನ್ನಾಗಿ ಕಾಣುತ್ತವೆ. ಆ ವ್ಯಕ್ತಿಯನ್ನು ಇಷ್ಟಪಡದಿದ್ದರೆ ಬೇರೆ ರೀತಿಯಲ್ಲಿ ಕಾಣುತ್ತವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ರಿಂಗ್ ರಸ್ತೆ ನಿರ್ಮಾಣಕ್ಕೆ ಒತ್ತು
ಎಸ್‌ಪಿ ಆರ್‌ಆರ್ ಯೋಜನೆಯಡಿ ದಾಬಸ್‌ಪೇಟೆ, ಅರಸನಕುಂಟೆ, ಮಾಗಡಿ, ರಾಮನಗರ, ಹಾರೋಹಳ್ಳಿ, ಕನಕಪುರ, ಹೊಸೂರು, ಆನೇಕಲ್‌ಗೆ ರಿಂಗ್ ರಸ್ತೆ ನಿರ್ಮಾಣ ಮಾಡಲು ಅಧಿವೇಶನದ ವೇಳೆ ನಾನು ಹಾಗೂ ಎಚ್.ಡಿ. ದೇವೇಗೌಡರು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ವೇಳೆ 4750 ಕೋಟಿ ರೂ. ಯೋಜನೆಗೆ 45 ದಿನಗಳಲ್ಲಿ ಅನುಮೋದನೆ ನೀಡುವುದಾಗಿ ಹೇಳಿ 30 ದಿನಗಳಲ್ಲಿ ಅನುಮೊದನೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.
ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಚಿಂತನೆ
ಅತ್ತಿಬೆಲೆ, ಚಂದಾಪುರ, ಬೆಂಗಳೂರು- ಹೊಸೂರು ಎಕ್ಸ್‌ಪ್ರೆಸ್ ಹೈವೇಗೆ ಭೇಟಿ ನೀಡಿ, ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಚಿಂತಿಸಲಾಗಿದೆ. ಕನಕಪುರ, ಸಾತನೂರು, ಚನ್ನಪಟ್ಟಣ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕಲು ಸ್ಥಳ ಪರಿಶೀಲಿಸಿ ರೈಲು ಕಂಬಿ ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸಲು ಚಾಲನೆ ನೀಡಲಾಗಿದೆ. ರೈಲು ಹಳಿಗಳನ್ನು ರಿಯಾಯಿತಿ ದರದಲ್ಲಿ ನೀಡುವಂತೆ ರೈಲ್ವೆ ಸಚಿವರಲ್ಲಿ ಖುದ್ದಾಗಿ ಮನವಿಮಾಡಲಾಗಿದೆ ಎಂದು ಸಂಸದರು ಹೇಳಿದರು.
ಕೊಬ್ಬರಿ ಬೆಳೆಗಾರರಿಗೆ ಅನುಕೂಲ
ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಭೇಟಿ ಮಾಡಿ ಕುಣಿಗಲ್ ವ್ಯಾಪ್ತಿಯ ಕೊಬ್ಬರಿ ಬೆಳೆಗಾರರಿಗೆ ಬಾಕಿ ಹಣ ಕೊಡಿಸಲಾಗಿದೆ. ಇದರಿಂದ ಆನೇಕಲ್‌ನಿಂದ ಹುಲಿಯೂರುದುರ್ಗದವರೆಗಿನ ಕೊಬ್ಬರಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದ ಮಂಜುನಾಥ್, ಮುಡಾ ವಿಚಾರವಾಗಿ ಅಂತಿಮ ಘಟ್ಟಕ್ಕೆ ಬಂದಿದೆ. ನ್ಯಾಯಾಧೀಶರ ತೀರ್ಪಿಗೆ ಕಾಯಲಾಗುತ್ತಿದೆ, ನ್ಯಾಯಾಂಗದ ತೀರ್ಪೇ ಅಂತಿಮ ಎಂದರು.
16,800 ಸಾವಿರ ದೀಪಾಲಂಕಾರ
ಹಿಂದು ಮಹಾಗಣಪತಿ ಕಾರ್ಯಕ್ರಮದಲ್ಲಿ 16,800 ಸಾವಿರ ದೀಪಾಲಂಕಾರ ಮಾಡಿದ್ದು ನನ್ನ ಜೀವನದಲ್ಲಿ ಅಮೃತಗಳಿಗೆ. ಸಮಸ್ತ ಜನರಿಗೆ ಆರೋಗ್ಯ, ಆಯಸ್ಸು, ನೆಮ್ಮದಿ, ಸಂಪತ್ತು ನೀಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಸಂಸದರು ತಿಳಿಸಿದರು.
ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಡಾ.ಮಲ್ಲೇಶ್ ಗುರೂಜಿ, ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ, ನಾಯಕ ನಟ ಪ್ರಣಮ್, ನಿರ್ಮಾಪಕ ಹರಿಪ್ರಸಾದ್, ಪುರಸಭಾ ಸದಸ್ಯರಾದ ಶಿವರುದ್ರಮ್ಮ, ವಿಜಯ್ ಕುಮಾರ್, ರಾಮು, ಅಶ್ವತ್ಥ್, ಅನಿಲ್, ಭಾಗ್ಯಮ್ಮ, ಮಾಜಿ ಸದಸ್ಯ ರೂಪೇಶ್, ಕಿರಣ್, ವಿಜಯಸಿಂಹ, ಭರತ್ ಜೈನ್, ವಿಜಿ, ದೇವರಾಜು, ಶ್ರೀನಾಗ, ದೊಡ್ಡಿ ಲೋಕೇಶ್, ಮಧು, ಚಿಕ್ಕಣ್ಣ, ರೋಹಿತ್, ದಂಡಿಗೆ ಪುರ ಕುಮಾರ್, ರಂಗಣ್ಣಿ, ಚಂದನ್, ರಾಘವೇಂದ್ರ, ಶಂಕರ್, ಕೆಂಚನಹಳ್ಳಿ ಕಿರಣ್ ಇತರರು ಇದ್ದರು.
ಇಂದು ಗಣಪತಿ ವಿಸರ್ಜನೆ
ಮಾಗಡಿ: ಪಟ್ಟಣದಲ್ಲಿ ಸೆ.15ರಂದು ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಮಾಗಡಿ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು ನೇತೃತ್ವದಲ್ಲಿ ಶನಿವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರ ಸಭೆ ಕರೆಯಲಾಗಿತ್ತು.
ಮಾಗಡಿ ಶಾಂತಿಗೆ ಹೆಸರುವಾಸಿ. ಕೋಮು ಸೌಹಾರ್ದ ಕದಡದಂತೆ ಒಗ್ಗಟ್ಟಾಗಿ ಹಬ್ಬ ಆಚರಿಸಿ, ಗಣೇಶ ವಿಸರ್ಜನೆ ವೇಳೆ ಗಲಾಟೆ, ಗಲಭೆಗಳಿಗೆ ಅವಕಾಶ ಕಲ್ಪಿಸಬಾರದು. ರಾತ್ರಿ 10 ಗಂಟೆಯೊಳಗೆ ಗಣೇಶ ಮೂರ್ತಿ ವಿಸರ್ಜಿಸುವಂತೆ ಗಿರಿರಾಜು ಮನವಿ ಮಾಡಿದರು.
ಕೇರಳ, ತಮಿಳುನಾಡು, ಕರ್ನಾಟಕದ ಪ್ರಸಿದ್ಧ ಕಲಾತಂಡಗಳ ಅದ್ದೂರಿ ಮೆರವಣಿಗೆ ಮೂಲಕ ಸುಮಾರು 13 ಅಡಿಯ ಗಣಪತಿಯನ್ನು ಗೌರಮ್ಮನಕೆರೆಗೆ ವಿಸರ್ಜಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಹೊಸ ಮಸೀದಿ ಬಳಿ ಗಣೇಶೋತ್ಸವ ಆಗಮಿಸುವ ವೇಳೆ ಮುಸ್ಲಿಮರು 2 ಸಾವಿರ ಲಾಡು ವಿತರಿಸಿ ಗಣೇಶೋತ್ಸವವನ್ನು ಸ್ವಾಗತಿಸಲು ಸಿದ್ಧತೆ ಕೈಗೊಂಡಿದ್ದಾರೆ.
ಬಿಗಿ ಬಂದೋಬಸ್ತ್‌ಗಾಗಿ 60 ಪೊಲೀಸ್ ಸಿಬ್ಬಂದಿ ಹಾಗೂ 2 ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.