ಜಿಲ್ಲೆ

ಮುಡಾ ಹಗರಣಗಳ ಒಳಮರ್ಮ ಬಯಲಾಗಲಿ

ಕುಮಟಾ: ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮತ್ತು ದಿನ ಬೆಳಗಾದರೆ ಪರಿಶಿಷ್ಟರ ಸಬಲೀಕರಣ ಎನ್ನುತ್ತಿದವರಿಗೇ ಬಹುಕೋಟಿ ಭ್ರಷ್ಟಾಚಾರದ, ಅಕ್ರಮದ ಹಗರಣ ಸುತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬಿ.ಎ. ಬಸವರಾಜ ಅವರು ರಾಜೀನಾಮೆ ನೀಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಆಗ್ರಹಿಸಿದರು.

ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಪತ್ನಿಗೆ ಕಾನೂನು ಬಾಹಿರವಾಗಿ, ಯಾವುದೇ ಅರ್ಹತೆ ಇಲ್ಲದಿದ್ದರೂ ಮುಡಾ ನಿವೇಶನ ಲಭ್ಯವಾಗಿದ್ದು, ಅವರ ಇನ್ನೊಂದು ಮುಖ ಅನಾವರಣವಾದಂತಾಗಿದೆ. ವಾಲ್ಮೀಕಿ ನಿಗಮದ ಹಗರಣವೂ ಮುಖ್ಯಮಂತ್ರಿ ಹಾಗೂ ಸಚಿವರ ಮೂಗಿನಡಿಯಲ್ಲೇ ನಡೆದಿದೆ. ಪರಿಶಿಷ್ಟರ ಅನುದಾನ ದುರ್ಬಳಕೆಯಾಗಿದೆ. ಈ ಎಲ್ಲಾ ಹಗರಣಗಳ ಸಿಬಿಐ ತನಿಖೆಯಾಗಬೇಕು. ಹಗರಣಗಳ ಒಳಮರ್ಮ ಬಯಲಾಗುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಸಂಪೂರ್ಣ ಹಗರಣಗಳ ಮಾಹಿತಿ ಸುದ್ದಿಗಾರರ ಮುಂದೆ ತೆರೆದಿಟ್ಟರು. ಮುಡಾದ ನಾಲ್ಕು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮೊದಲು ಅಡಿಪಾಯ ಹಾಕಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಲ್ಲವೂ ಕಾಂಗ್ರೆಸ್ ಸರ್ಕಾರ ಇರುವಾಗಲೇ ನಡೆದಿದೆ. ಬಿಜೆಪಿ ಸರ್ಕಾರ ಬಂದಾಗ ಹಿರಿಯ ಅಧಿಕಾರಿಗಳ ತಂಡದಿಂದ ತನಿಖಾ ವರದಿ ಪಡೆದಿದ್ದು, ಅಕ್ರಮಗಳ ಸ್ಪಷ್ಟ ಉಲ್ಲೇಖವಾಗಿದೆ. ಈ ಬಗ್ಗೆ ಸದ್ಯದ ಕಾಂಗ್ರೆಸ್ ಸರ್ಕಾರಕ್ಕೆ ಜಿಲ್ಲಾಧಿಕಾರಿ 14 ಪತ್ರ ಬರೆದಿದ್ದರೂ ಪತ್ರಗಳು ಕಸದ ಬುಟ್ಟಿ ಸೇರಿದೆ. ಇದೆಲ್ಲಕ್ಕೂ ತೇಪೆ ಹಾಕುವಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ತನಿಖಾ ಅಧಿಕಾರಿಯಾಗಿ ನೇಮಿಸಿ, ಜನರ ಕಣ್ಣಿಗೆ ಮಂಕುಬೂದಿ ಎರಚಲು ಹೊರಟಿದ್ದಾರೆ. ಆದ್ದರಿಂದ ಸಿಬಿಐ ತನಿಖೆ ಅಥವಾ ಹಿರಿಯ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿದರು. ಪ್ರಶಾಂತ ನಾಯ್ಕ, ವಿನಾಯಕ ನಾಯ್ಕ, ಮೋಹಿನಿ ಗೌಡ, ಜಯಾ ಶೇಟ, ಗಣೇಶ ಪಂಡಿತ, ಎಂ.ಎಂ. ಹೆಗಡೆ, ಸಂತೋಷ ನಾಯ್ಕ, ಹರಿಹರ ನಾಯ್ಕ, ತುಳಸು ಗೌಡ, ಎಸ್.ವಿ. ಹೆಗಡೆ ಭದ್ರನ್, ಇತರರಿದ್ದರು.

ಸೋರಿಕೆ ತಡೆಯದಿದ್ದರೆ ಪ್ರತಿಭಟನೆ ಕುಮಟಾದ ಮುಖ್ಯ ಬಸ್ ನಿಲ್ದಾಣ ಸೋರುತ್ತಿದೆ. ಆವರಣದಲ್ಲಿ ಹೊಂಡಗುಂಡಿಗಳಾಗಿದೆ. ಸರ್ಕಾರದ ಬಳಿ ದುರಸ್ತಿಗೂ ಹಣವಿಲ್ಲ, ಇಲ್ಲಿ ಶಾಸಕರು ಏನೂ ಮಾಡುತ್ತಿಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದ್ದರಿಂದ ಮುಂದಿನ 15 ದಿನದಲ್ಲಿ ಬಸ್ ನಿಲ್ದಾಣದ ಮೇಲೆ ಶೀಟ್ ಅಳವಡಿಸಿ ಸೋರಿಕೆ ತಡೆಯದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಗ್ಯಾರಂಟಿಗಳಿಗೂ ದುಡ್ಡಿಲ್ಲ, ಪಂಚಾಯಿತಿ ಸದಸ್ಯರ ಗೌರವಧನವೂ ಬಾಕಿಯಾಗಿದೆ. ಹೊಸ ರಸ್ತೆಗಳಿರಲಿ, ನಿರ್ವಹಣೆಗೂ ಅನುದಾನ ಬರುತ್ತಿಲ್ಲ. ಬಸ್ ನಿಲ್ದಾಣದ ದುಸ್ಥಿತಿ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದೇನೆ. ನಿಗಮದ ವ್ಯವಸ್ಥಾಪಕಿ ಪ್ರಿಯಾಂಗಾ ಎಂ.ಅವರಿಗೂ ಮಾತನಾಡಿದ್ದೇನೆ ಎಂದರು.