ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದವರು ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನವರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಲಿ ಎಂದು ಸಲಹೆ ನೀಡಿದರು.
ಮುಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಮೂಡಾಕ್ಕೆ ಕೈ ಮುಗಿದು, ಕ್ಷಮೆ ಕೇಳಿ ಬರಲಿ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಏಕೆ ಹೆದರುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಯಡಿಯೂರಪ್ಪ ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದರೆ? ಎಂದು ಜೋಶಿ ಪ್ರಶ್ನಿಸಿದರು
ಮುಡಾ ಹಗರಣದಲ್ಲಿ ಖಾಸಗಿಯವರು ದೂರು ನೀಡಿದ್ದರಿಂದ ಈಗ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಯಡಿಯೂರಪ್ಪ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸವೇನಿಲ್ಲ. ಸಿಎಂ ಮೊದಲು ತನಿಖೆ ಎದುರುಸಲಿ ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ರಾಜ್ಯಪಾಲರನ್ನು ಏಕೆ ಬೆದರಿಸುತ್ತೀರಿ ? : ಮುೂಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದ ಕಾರಣಕ್ಕೆ ರಾಜಭವನ ಚಲೋ ಮೂಲಕ ರಾಜ್ಯಪಾಲರನ್ನ ಬೆದರಿಸುವ, ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆಯನ್ನು ಪ್ರಲ್ಹಾದ ಜೋಶಿ ಖಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಮುಡಾ ಹಗರಣದಲ್ಲಿ ತಪ್ಪು ಮಾಡಿಲ್ಲ ಎಂದ ಮೇಲೆ ರಾಜ್ಯಪಾಲರನ್ನು ಬೆದರಿಸುವಂತಹ ರಾಜಭವನ ಚಲೋದಂತಹ ಡ್ರಾಮಾ ಏಕೆ? ಎಂದು ಸಚಿವ ಜೋಶಿ ಪ್ರಶ್ನಿಸಿದರು.
ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಜಿಸ್ಟ್ರಾರ್ ಆಗಿ ಪ್ರಮೋಷನ್ ನೀಡಲಾಗಿದೆ. ಆದರೆ, ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಈಗ ತನಿಖೆಗೆ ಅನುಮತಿ ನೀಡಿದರೆಂದು ರಾಜ್ಯಪಾಲರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವನು ಎರಡು ಬಾರಿ ಮುಖ್ಯಮಂತ್ರಿ ಆದಕಾರಣಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ರಾಜ್ಯಪಾಲರು ಸಹ ದಲಿತರೇ, ಅತ್ಯಂತ ಹಿಂದುಳಿದ ವರ್ಗದಿಂದ ಬಂದವರೇ ಆಗಿದ್ದಾರೆ. ಈ ಮೊದಲು ರಾಜ್ಯಪಾಲರನ್ನು ಹೊಗಳುತ್ತಿದ್ದ ಮುಖ್ಯಮಂತ್ರಿ, ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರನ್ನು ಬೆದರಿಸುವುದೇಕೆ? ಎಂದು ಜೋಶಿ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಹೈಡ್ರಾಮಾ ಬಿಟ್ಟು ತನಿಖೆ ಎದುರಿಸಲಿ. ತಾವು ಶುದ್ಧರು ಹೌದೋ ಅಥವಾ ಅಲ್ಲಮೋ ಎಂಬುದನ್ನು ನ್ಯಾಯಾಲಯ ತೀಮಾನಿಸುತ್ತದೆ ಎಂದರು.