ಜಿಲ್ಲೆ

ಪಾದುಕೆಗೆ ಅರ್ಪಿತ ಹಣ ವಿವಿವಿ ಸಂಚಾಲನೆಗೆ ಬಳಕೆಯಾಗಲಿ

ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ (ವಿವಿವಿ) ಈ ಸಹಸ್ರಮಾನದ ಅಪರೂಪದ ಯೋಜನೆಯಾಗಿದೆ. ಇದರ ನಿರ್ಮಾಣ ಎಷ್ಟು ಕಷ್ಟಕರ ಕಾರ್ಯವೋ, ಸಮರ್ಥ ನಿರ್ವಹಣೆ ಅದಕ್ಕಿಂತ ಕಷ್ಟವಾದುದು. ಈ ಹಿನ್ನೆಲೆಯಲ್ಲಿ ವಿವಿವಿ ನಿರ್ವಹಣೆಯ ಮೂಲ ಉದ್ದೇಶಕ್ಕಾಗಿ ಸ್ವರ್ಣಪಾದುಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಪಾದುಕೆಗೆ ಅರ್ಪಿತವಾಗುವ ಪ್ರತಿಯೊಂದು ರೂಪಾಯಿ ವಿವಿವಿ ಸಂಚಾಲನೆಗೆ ಬಳಕೆಯಾಗಲಿದೆ ಎಂದು ಚಾತುರ್ಮಾಸ್ಯ ವ್ರತನಿಷ್ಠ ಶ್ರೀಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಸೋಮವಾರ ಸಿದ್ದಾಪುರ ಮಂಡಲಾಂತರ್ಗತ ಅಂಬಾಗಿರಿ, ಹಾರ್ಸಿಕಟ್ಟ ಮತ್ತು ಹರೀಶಿ ಮಂಗಳೂರು ವಲಯಗಳ ಶಿಷ್ಯಭಕ್ತರಿಂದ ಭಿಕ್ಷಾಸೇವೆ ಸ್ವೀಕರಿಸಿ ಅವರು ಆಶೀರ್ವದಿಸಿದರು.
ಶ್ರೀಮಠದ ಶಿಷ್ಯ ಭಕ್ತರಿಗೆ ಸೇವೆ ಮತ್ತು ಸಾರ್ಥಕ ಭಾವನೆ ಒಡಮೂಡಿಸಲು ಸ್ವರ್ಣಪಾದುಕೆ ಸಮಾಜದಲ್ಲಿ ಯಾತ್ರಾ ಪರ್ಯಟನ ಪ್ರಾರಂಭಿಸಲಿದೆ. ಈ ಯಾತ್ರೆಗಾಗಿ ಈಗಾಗಲೇ ವಿಶೇಷ ಸಮಿತಿ ಕಾರ್ಯೋನ್ಮುಖವಾಗಿದ್ದು, ಇದರ ಮೂಲಕ ವಿಶ್ವವಿದ್ಯಾಪೀಠದ ಸಮಗ್ರ ಮಾಹಿತಿ ಒಳಗೊಂಡಂತೆ ವಿವಿವಿಯ ಪರಿಕಲ್ಪನೆ ಮತ್ತು ವೈಶಿಷ್ಟ್ಯಗಳನ್ನು ಮನೆ ಮನೆಗೆ ಮುಟ್ಟಿಸಲಾಗುವುದು. ಶ್ರೀಮಠದ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವ ನಿಮಿತ್ತದ ಈ ಬೃಹತ್ ಜಾಲದಲ್ಲಿ ಪ್ರತಿ ಮನೆಗೊಬ್ಬ ಕಾರ್ಯಕರ್ತ ಸಜ್ಜಾಗಬೇಕು. ಇದರ ಜತೆಗೆ ಹವ್ಯಕ ಮಹಾಮಂಡಲ ವ್ಯಾಪ್ತಿಯಲ್ಲಿ ಶ್ರೀಮಠ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ಸಾಗಬೇಕು. ಇದು ಉನ್ನತ ಸಾಧನೆಗೆ ಸರ್ವಶ್ರೇಷ್ಠ ಪ್ರೇರಣೆಯಾಗಬಲ್ಲದು ಎಂದು ಶ್ರೀಗಳು ಸರ್ವರನ್ನು ಆಶೀರ್ವದಿಸಿದರುಸ.
ಇದೇ ಸಂದರ್ಭದಲ್ಲಿ ಶ್ರೀಗಳು ಸಿದ್ದಾಪುರ ಹವ್ಯಕ ಮಂಡಲದ ನೂತನ ಪದಾಧಿಕಾರಿಗಳ ಉದ್ಘೋಷ ಕೈಗೊಂಡರು. ಪ್ರತಿ ವಲಯದಿಂದ ಐವರು ಸಾಧಕರು ಮತ್ತು ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿವಿವಿ ಮುಖ್ಯಸ್ಥ ಆರ್.ಎಸ್. ಹೆಗಡೆ ಹರಗಿ, ನಾಗರಾಜ ಭಟ್ಟ ಪಿದಮಲೆ, ಅರವಿಂದ ದರ್ಭೆ, ಎಂ.ವಿ. ಹೆಗಡೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ವಿವಿವಿ ಆಡಳಿತಾಧಿಕಾರಿ ಪ್ರಸನ್ನಕುಮಾರ ಟಿ.ಜಿ., ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಉಪಸ್ಥಿತರಿದ್ದರು.