ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಸುದ್ದಿಗೋಷ್ಠಿ ನಡೆಸಿದರು. ಈರಣ್ಣ ರಾವೂರ, ಮಳನಗೌಡ ಪಾಟೀಲ, ವಿಜಯಕುಮಾರ ಜೋಷಿ ಇದ್ದಾರೆ.  
ಜಿಲ್ಲೆ

ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ಕೊಡಲಿ; ವಿಪ ಮಾಜಿ ಸದಸ್ಯ ಶಹಾಪುರ ಆಗ್ರಹ

ವಿಜಯಪುರ: ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ಇಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆಯಲ್ಲದೇ, ಜನರನ್ನು ಶೋಷಣೆ ಮಾಡಲು ರಾಜ್ಯ ಸರ್ಕಾರ ಪಣ ತೊಟ್ಟಿರುವುದೇಕೆ ಎಂದು ಪ್ರಶ್ನಿಸಿದರೂ ಸಂಬಂಧವೇ ಇಲ್ಲದಂತಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ಕೂಡಲೇ ರಾಜೀನಾಮೆ ಪಡೆಯಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಆಗ್ರಹಿಸಿದರು.

ಶಿಕ್ಷಣ ವ್ಯವಸ್ಥೆಯನ್ನೇ ಹಳ್ಳ ಹಿಡಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದರೂ ಶಿಕ್ಷಣ ಸಚಿವರು ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ರಾಜೀನಾಮೆ ಕೊಡುತ್ತಾರೋ ಬಿಡುತ್ತಾರೋ….ಆದರೆ, ಶಿಕ್ಷಣ ವ್ಯವಸ್ಥೆಯನ್ನೇ ಹಳ್ಳ ಹಿಡಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆಯನ್ನು ಮೊದಲು ಪಡೆಯಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಸದ್ಯ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಹಲವಾರು ತನಿಖೆ ಎದುರಿಸುತ್ತಿರುವ ಕಾರಣ ಕರ್ನಾಟಕದ ಆಡಳಿತ ಕುಸಿದಿದೆ. ಬೆಕ್ಕು ಇಲ್ಲದ ಮನೆಯಲ್ಲಿ ಇಲಿಗಳು ಆಡಿದ್ದೇ ಆಟ ಎಂಬಂತೆ ಅಧಿಕಾರಿ ವರ್ಗ ವರ್ತಿಸುತ್ತಿದೆ ಎಂದರು.

ಈ ಹಿಂದೆ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವುದಾಗಿ ಹೇಳಿದಾಗಲೇ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದೆ. ಆದರೂ, ನಿರ್ಧಾರ ಹಿಂತೆಗೆದುಕೊಳ್ಳದ ಹಿನ್ನೆಲೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಸಹ ಛೀಮಾರಿ ಹಾಕಿದೆ. ಕಪಾಳ ಮೋಕ್ಷ ಮಾಡಿದೆ. ಆದರೂ, ವ್ಯವಸ್ಥೆ ಸುಧಾರಿಸಿಲ್ಲ ಎಂದರು.

ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸತ್ತು ಹೋಗಿದೆ. ರಾಜ್ಯದ ಪರೀಕ್ಷಾ ಪ್ರಾಧಿಕಾರ ಸಂಪೂರ್ಣ ಹಳ್ಳ ಹಿಡಿದಿದೆ. ಯಾವ ಪರೀಕ್ಷೆಯೂ ಸುವ್ಯವಸ್ಥಿತವಾಗಿ ನಡೆಸದಷ್ಟು ದುಃಸ್ಥಿತಿ ನಿರ್ಮಾಣವಾಗಿದೆ. ಶುಲ್ಕದಲ್ಲಿ ಲಾಭ ಇದೆ ಎಂದು ಪರೀಕ್ಷೆ ನಡೆಸುವುದನ್ನೇ ಉದ್ಯಮವಾಗಿ ಮಾಡಿಕೊಂಡಂತಿದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಶುಲ್ಕ ಸಂಗ್ರಹವಾಗಿದ್ದೆಷ್ಟು? ಅಂದಾಜಿನ ಪ್ರಕಾರ ಶುಲ್ಕ ಸಂಗ್ರಹದಲ್ಲಿ ನೂರಾರು ಕೋಟಿ ಹಗರಣ ಆಗಿದೆ. ವಿದ್ಯಾರ್ಥಿ ಶುಲ್ಕದಲ್ಲಿಯೇ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಯೋಚನೆ ರಾಜ್ಯ ಸರ್ಕಾರಕ್ಕಿದ್ದಂತಿದೆ. ಇಡೀ ರಾಜ್ಯದಲ್ಲಿ ಒಬ್ಬನೇ ಒಬ್ಬ ಕ್ರೀಡಾ ಶಿಕ್ಷಕ ಇಲ್ಲ. ಆದರೂ, ಕ್ರೀಡಾ ಶುಲ್ಕ ಮಾತ್ರ ವಸೂಲು ಮಾಡುತ್ತಾರೆ ಎಂದು ಶಹಾಪುರ ಆಪಾದಿಸಿದರು.

ವೆಬ್‌ಕಾಸ್ಟಿಂಗ್,ಎಸ್‌ಎಸ್‌ಎಲ್‌ಸಿ ವಿಜ್ಞಾನ ಪ್ರಶ್ನೆ ಪತ್ರಿಕೆ ವಿನ್ಯಾಸ ಮತ್ತು ರಚನೆ ಕುರಿತ ಅವೈಜ್ಞಾನಿಕ ನೀತಿಯಿಂದಾಗಿ ಶಿಕ್ಷಕರು, ಪಾಲಕರು ರೋಸಿ ಹೋಗಿದ್ದಾರೆ. ಈಗಲೋ ಆಗಲೋ ಬಿದ್ದು ಹೋಗುವ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿಯಾದರೂ ಏನು ಪ್ರಯೋಜನವೆಂದು ಕಾದು ನೋಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದ ಜನ ಶಿಕ್ಷಣ ವ್ಯವಸ್ಥೆ ಬಗೆಗಿನ ಸಕಾರಾತ್ಮಕ ಧೋರಣೆಯನ್ನೇ ಕಳೆದುಕೊಳ್ಳವರೆಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಈರಣ್ಣ ರಾವೂರ, ಮಳನಗೌಡ ಪಾಟೀಲ, ವಿಜಯಕುಮಾರ ಜೋಷಿ ಇದ್ದರು.