ಕೆ.ಆರ್.ನಗರ: ಸೂಕ್ಷ್ಮಾತಿ ಸೂಕ್ಷ್ಮಹಾಗೂ ಹಿಂದುಳಿದ ಸಮಾಜಗಳು ಮುಖ್ಯವಾಹಿನಿಗೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಗಳು ಮುನ್ನೆಲೆಗೆ ಬರಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.
ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಸವಿತಾ ಮಂಗಳವಾದ್ಯ ಕಲಾವಿದರ ಸಂಘದಿಂದ ಬುಧವಾರ ಆಯೋಜಿಸಿದ್ದ ಶ್ರೀ ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಪ್ರತಿ ಸಮಾಜಕ್ಕೆ ನಿಗಮ ಸ್ಥಾಪಿಸಿ ಸಮಾಜದ ಮಹನೀಯರ ಜಯಂತಿ ಆಚರಣೆಯನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಸ್ಥಾನಮಾನ, ಅಧಿಕಾರದ ಜತೆಗೆ ಉತ್ತಮ ಶಿಕ್ಷಣವೂ ಮುಖ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಗೆ ಅಂಟಿಕೊಳ್ಳದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಬೇಕು. ನಿಮ್ಮ ಸಮುದಾಯದ ಜಿಲ್ಲಾಧ್ಯಕ್ಷರಿಗೆ ಮೈಸೂರು ಭಾಗದಿಂದ ನಿಗಮ ಮಂಡಳಿ ಸ್ಥಾನಮಾನ ಕೊಡಿಸಲು ನಾವು ಸಿದ್ಧರಿದ್ದು, ಒಗ್ಗಟ್ಟಿನಿಂದ ಸಹಕರಿಸಿದರೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯು ಸೌಂದರ್ಯವಾಗಿ ಕಾಣಲು ಕೇಶಲಂಕಾರಿಗಳ ಪಾತ್ರ ಬಹುದೊಡ್ಡದಿದೆ. ಅಲ್ಲದೆ ಮಂಗಳವಾದ್ಯದಂತಹ ಕಲೆಯನ್ನು ಅಳವಡಿಸಿಕೊಂಡಿರುವ ನಿಮ್ಮ ವೃತ್ತಿ ಸಮಾಜದ ಅತ್ಯವಶ್ಯಕವಾಗಿದ್ದು. ಆ ವೃತ್ತಿಯ ಜತೆಗೆ ಬೇರೆ ಬೇರೆ ವೃತ್ತಿಗಳನ್ನು ಮಾಡುವ ಮೂಲಕ ಆರ್ಥಿಕ ಸಬಲರಾಗಬೇಕು ಎಂದು ಸಲಹೆ ನೀಡಿದರು.
ನಾನು ಸಿದ್ದರಾಮಯ್ಯ ಸರ್ಕಾರದ ಹಿಂದಿನ ಅವಧಿಯಲ್ಲಿ ಪಟ್ಟಣದಲ್ಲಿರುವ ಸವಿತ ಮಹರ್ಷಿ ಸಮುದಾಯದ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಕೊಡಿಸಿದ್ದು, ಸಮಾಜದ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಭವನ ಉದ್ಘಾಟನೆ ಮಾಡುವ ಕೆಲಸ ಮಾಡೋಣ. ಈಗಾಗಲೇ ಹೊಸಕೋಟೆ ಗ್ರಾಮದ ಭವನಕ್ಕೆ 3 ಲಕ್ಷ ರೂ., ಚನ್ನಂಗೆರೆ ಗ್ರಾಮದ ಭವನಕ್ಕೆ 5 ಲಕ್ಷ ರೂ. ಸೇರಿದಂತೆ ಸಾಕಷ್ಟು ಅನುದಾನ ಮತ್ತು ಅಧಿಕಾರ ಸ್ಥಾನಮಾನಗಳನ್ನು ನೀಡಿದ್ದು, ಮುಂದೆಯೂ ಕೂಡ ನೀಡುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಸರ್ಕಾರ ಹಿಂದುಳಿದ ಸಮಾಜಗಳನ್ನು ಗುರುತಿಸಿ ಮೀಸಲಾತಿ ಕೊಡಬೇಕು. ಅಲ್ಲದೆ ತಮ್ಮ ಹಕ್ಕುಗಳು, ಮೀಸಲಾತಿಗಾಗಿ ಸಮುದಾಯಗಳು ಸಂಘಟಿತರಾಗಿ ಹೋರಾಟ ಮಾಡಬೇಕು.ಆಗ ಸರ್ಕಾರ ಗುರುತಿಸಲಿದೆ. ಪಟ್ಟಣದಲ್ಲಿ ಈ ಸಮುದಾಯದ ಭವನ ಕಟ್ಟಲು ಯಾರೂ ಹೋರಾಟ ಮಾಡಲಿಲ್ಲ. ಆದರೆ ಸಮುದಾಯ ಭವನ ಉದ್ಘಾಟನೆ ಮಾಡಲು ಬಣಗಳಾಗಿ ಹೋರಾಟ ಮಾಡುತ್ತಿರುವುದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭಾ ಅಧ್ಯಕ್ಷ ಶಿವುನಾಯಕ್, ಸವಿತ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ಬಿಇಒ ಆರ್.ಕೃಷ್ಣಪ್ಪ, ಕರ್ಪೂರಿ ಠಾಕೂರ್ ಒಬಿಸಿ ಜಿಲ್ಲಾಧ್ಯಕ್ಷ ಕೆ.ಎಸ್.ಭಾಸ್ಕರ್, ಸವಿತಾ ಮಂಗಳವಾದ್ಯ ಕಲಾವಿದರ ಸಂಘದ ಅಧ್ಯಕ್ಷ ಕೆ.ಪಿ.ನಾರಾಯಣ, ಮುಖಂಡ ಚಿಕ್ಕಮಾದು ಮಾತನಾಡಿದರು.
ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಿದ್ವಾನ್ ಪಿ.ರಾಜಗೋಪಾಲ್ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಅಲಂಕೃತ ಬೆಳ್ಳಿರಥದಲ್ಲಿ ಹಡಪದ ಅಪ್ಪಣ್ಣ ಸವಿತ ಮಹರ್ಷಿ ಹಾಗೂ ತ್ಯಾಗರಾಜರ ಭಾವಚಿತ್ರವನ್ನು ವಾದ್ಯಗೋಷ್ಠಿ ಹಾಗೂ ವಿವಿಧ ಕಲಾ ತಂಡಗಳಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭಾ ಸದಸ್ಯರಾದ ಮಂಜುಳಾ ಚಿಕ್ಕವೀರು, ನಟರಾಜು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹಾದೇವಸ್ವಾಮಿ, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ಸವಿತಾ ಮಂಗಳವಾದ್ಯ ಕಲಾವಿದರ ಸಂಘದ ಗೌರವಾಧ್ಯಕ್ಷ ಎಚ್. ಮಹದೇವ, ಉಪಾಧ್ಯಕ್ಷರಾದ ರಾಚಯ್ಯ, ಭೇರ್ಯ ಲೋಲ, ಕಾರ್ಯದರ್ಶಿ ಜಿ.ಕೆ.ವಿನಯಕುಮಾರ್ ಇರಿದ್ದರು.